ಬೆಳಗಾವಿ:ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಕಿ ಅವಘಡದಿಂದ ಮನೆಗಳು ಸುಟ್ಟು ಆರ್ಥಿಕ ನಷ್ಟಕ್ಕೀಡಾಗಿದ್ದವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಧನಸಹಾಯ ಮಂಜೂರಾಗಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಟ್ಟು 9 ಮನೆಗಳಿಗೆ ತಲಾ 1 ಲಕ್ಷ ರೂ.ಗಳಂತೆ 9 ಲಕ್ಷ ರೂ. ಮಂಜೂರು ಮಾಡಿದ್ದಾರೆ.
ಹಲಗಾ, ಹಿರೇಬಾಗೇವಾಡಿ ಹಾಗೂ ಬಡಸ್ ಕೆ.ಹೆಚ್. ಗ್ರಾಮಗಳಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿತ್ತು. ಅನೇಕ ಮನೆಗಳು ಬೆಂಕಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡುವಂತೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಸಲ್ಲಿಸಿದ್ದರು.
ಮುಖ್ಯಮಂತ್ರಿಗಳು 9 ಸಂತ್ರಸ್ತರಿಗೆ ತಲಾ ಒಂದು ಲಕ್ಷ ರೂ. ಪರಿಹಾರದಂತೆ ಒಟ್ಟು 9 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲು ಸೂಚಿಸಿದ್ದಾರೆ. ಆದಷ್ಟು ಬೇಗ ಸಂತ್ರಸ್ತರಿಗೆ ಪರಿಹಾರದ ಚೆಕ್ಗಳನ್ನು ಹಸ್ತಾಂತರಿಸುತ್ತೇನೆ ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.