ಬೆಳಗಾವಿ:ಮಹಾರಾಷ್ಟ್ರ ಸರ್ಕಾರ ಗಡಿ ಭಾಗದ ನಿಪ್ಪಾಣಿ ಹಾಗೂ ಬೆಳಗಾವಿ ಭಾಗದ ಜನರಿಗೆ ಜ್ಯೋತಿಬಾ ಆರೋಗ್ಯ ವಿಮೆ ಮಾಡುವುದಕ್ಕೆ 54 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕೂಡಾ ಮಹಾರಾಷ್ಟ್ರದ ಪಂಢರಪುರ, ತುಳಜಾಪೂರ ಸುಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಿದ್ದೇವೆ. ಆದರೆ, ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಮಾಹಿತಿ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ನಗರದಲ್ಲಿಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಹಲವು ಪುಣ್ಯ ಕ್ಷೇತ್ರಗಳಲ್ಲಿ ಭೇಟಿ ನೀಡುವ ಕರ್ನಾಟಕ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನಾವು ಕೂಡ ಅಭಿವೃದ್ಧಿಗೆ ಹಣವನ್ನು ಬಿಡುಗಡೆ ಮಾಡಿದ್ದೇವೆ. ಮಹಾರಾಷ್ಟ್ರ ಸರ್ಕಾರ ಹಣ ಬಿಡುಗಡೆ ನನಗೆ ಮಾಹಿತಿಯಿಲ್ಲ ಎಂದು ತಿಳಿಸಿದರು.
ಇಂದು ಬೆಳಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಮಹಾರಾಷ್ಟ್ರ ಸರ್ಕಾರ ಹಣ ಬಿಡುಗಡೆ ಬಗ್ಗೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಧ್ಯಮಗೋಷ್ಟಿಯಲ್ಲಿ ರಾಜ್ಯದ ಹಿತ ಕಾಯುವಲ್ಲಿ ವಿಫಲವಾಗಿರುವ ಬಸವರಾಜ ಬೊಮ್ಮಾಯಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಹ ಒತ್ತಾಯಿಸಿದ್ದರು.
ಪ್ರತಿಪಕ್ಷದ ನಾಯಕರ ಒತ್ತಾಯಕ್ಕೆ ಪ್ರತಿಕ್ರಿಯಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಮಹಾರಾಷ್ಟ್ರದವರು ಹಣ ಬಿಡುಗಡೆ ಮಾಡಿದರೆ ನಾನು ಹೇಗೆ ರಾಜೀನಾಮೆ ನೀಡಲಿ? ನಾವು ಕೂಡ ಮಹಾರಾಷ್ಟ್ರದಲ್ಲಿರುವ ಪಂಢರಪುರ, ತುಳಜಾಪುರಕ್ಕೆ ಹೋಗುವ ಕರ್ನಾಟಕದ ಭಕ್ತರಿಗೆ ಹಣ ಬಿಡುಗಡೆ ಮಾಡುತ್ತೇವೆ. ಅವರು ಏನು ಬಿಡುಗಡೆ ಮಾಡಿದ್ದಾರೆ ಎಂಬುದನ್ನು ನೋಡುತ್ತೇನೆ. ಯಾವ ರೀತಿಯಲ್ಲಿ ತಡೆಗಟ್ಟಬೇಕು ಅನ್ನೋದು ನೋಡುವೆ. ಡಿ.ಕೆ. ಶಿವಕುಮಾರ್ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಇದೇ ವೇಳೆ ತಿರುಗೇಟು ನೀಡಿದರು.
ಮಹಾರಾಷ್ಟ್ರ ಆರೋಗ್ಯ ವಿಮೆ ಕರ್ನಾಟದ ಗಡಿ ಭಾಗದ ಜನರು ಫಲಾನುಭವಿಗಳು:ಮಹಾರಾಷ್ಟ್ರ ರಾಜ್ಯದ ಜನರ ಮನೆ ಮಾತಾಗಿರುವ ಜ್ಯೋತಿಬಾ ಫುಲೆ ಜನ ಆರೋಗ್ಯ ವಿಮೆಯನ್ನು ಕರ್ನಾಟಕ ರಾಜ್ಯ ಬೆಳಗಾವಿ ಹಾಗೂ ನಿಪ್ಪಾಣಿ ಭಾಗದ ಗಡಿ ಜನರಿಗೆ ಅನ್ವಯಿಸುವಂತೆ ಮಹಾರಾಷ್ಟ್ರ ಸರ್ಕಾರ ಹೆಚ್ಚುವರಿ 54 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಮಹಾರಾಷ್ಟ್ರ ಗಡಿ ಹೊಂದಿರುವ ಕರ್ನಾಟಕ ಹಲವು ಗಡಿ ಗ್ರಾಮದ ಜನರಿಗೆ ಅನ್ವಯಿಸುವಂತೆ ಮಹಾರಾಷ್ಟ್ರ ಸರ್ಕಾರ ಶಿಫಾರಸು ಹೊರಡಿಸಿದೆ.
ಇದನ್ನೂ ಓದಿ:ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ: ಸಿದ್ದರಾಮಯ್ಯ