ಬೆಳಗಾವಿ: ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್ನ ಓಮಿಕ್ರಾನ್ ಪ್ರಬೇಧ ವ್ಯಾಪಕವಾಗಿ ಹರಡಿದ್ದು ಈ ಕುರಿತು ದೇಶದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನೀಡಿರುವ ಎಚ್ಚರಿಕೆ ಹಿನ್ನೆಲೆ ಈ ಕುರಿತು ಚರ್ಚಿಸಲು ಸುವರ್ಣಸೌಧದಲ್ಲಿ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ಬಗ್ಗೆ ಕೇಂದ್ರದಿಂದ ಬಂದಿರುವ ಎಚ್ಚರಿಕೆಯನ್ನು ರಾಜ್ಯ ಗಂಭೀರವಾಗಿ ತೆಗೆದುಕೊಂಡಿದೆ. ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಸೇರಿದಂತೆ ವಿಶ್ವಮಟ್ಟದಲ್ಲಿ ಏನು ಆಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ಕೊಟ್ಟಿದೆ ಎಂದರು.
ಯಾವ ರೀತಿ ನಿಯಂತ್ರಣ ಮಾಡಬೇಕು, ಯಾವ ರೀತಿ ಟೆಸ್ಷ್ಗಳನ್ನ ಹೆಚ್ಚಳ ಮಾಡಬೇಕೆಂಬ ಬಗ್ಗೆ ನಾಳೆ ವಿಶೇಷ ಸಭೆಯನ್ನ ಕರೆದಿದ್ದೇನೆ. ಸುವರ್ಣ ಸೌಧದಲ್ಲಿಯೇ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಕೋವಿಡ್ ಹರಡುವುದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಈಶ್ವರಪ್ಪ, ಜಾರಕಿಹೊಳಿ ಜೊತೆ ಮಾತನಾಡುತ್ತೇನೆ:ಈಶ್ವರಪ್ಪ ಹಿರಿಯರಿದ್ದಾರೆ, ಅವರಿಗೆ ಅಸಮಾಧಾನ ಏನು ಇಲ್ಲ. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಭೇಟಿ ಮಾಡುತ್ತಾರೆ. ಅವರೊಂದಿಗೆ ಮಾತನಾಡುತ್ತೇನೆ. ಸಚಿವ ಸಂಪುಟ ವಿಸ್ತರಣೆ ಮಾಡಬೇಕು, ಮಾಡಿದಾಗ ನಿಮಗೆ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ:ಚೀನಾದಲ್ಲಿ ಕೋವಿಡ್ ಸ್ಫೋಟ: ಭಾರತೀಯರು ಜಾಗರೂಕರಾಗಿರಿ, ಆತಂಕ ಬೇಡ ಎಂದ ತಜ್ಞರು