ಬೆಳಗಾವಿ: ಸುರೇಶ್ ಅಂಗಡಿ ರೈಲ್ವೆ ಸಚಿವರಾಗಿ ದೇಶಕ್ಕೆ, ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹೀಗಾಗಿ ಮಂಗಳಾ ಅಂಗಡಿಯವರು ಸುಮಾರು ಎರಡರಿಂದ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಂಗಳಾ ಅಂಗಡಿಯವರು ಚುನಾವಣೆಗೆ ನಿಲ್ಲಲು ಸಿದ್ಧರಿರಲಿಲ್ಲ. ಇದೊಂದು ವಿಶೇಷ ಸಂದರ್ಭ ಆಗಿದ್ದಕ್ಕೆ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿ ಒಪ್ಪಿಸಿದ್ದೇವೆ. ಸುಮಾರು ಎರಡರಿಂದ ಮೂರು ಲಕ್ಷ ಮತಗಳ ಅಂತರದಿಂದ ಅವರು ಗೆಲ್ಲುವ ವಿಶ್ವಾಸವಿದೆ. ಈಗಾಗಲೇ ಸುರೇಶ್ ಅಂಗಡಿಯವರು ರೈಲ್ವೆ ಸಚಿವರಾಗಿ ದೇಶಕ್ಕೆ, ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಎಲ್ಲಾ ವರ್ಗದ ಜನರು ನಮ್ಮೊಂದಿಗೆ ಬರ್ತಿದ್ದಾರೆ ಎಂದರು.
ಮಂಗಳಾ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಸಿಎಂ ಬಿಎಸ್ವೈ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಜಾತಿ ವಿಷ ಬೀಜ ಬಿತ್ತಿ ಹಣ ಮತ್ತು ಹೆಂಡದ ಬಲದಿಂದ ಚುನಾವಣೆ ಗೇಲ್ತೀವಿ ಅಂತಿದ್ದರು. ಆದರೆ, 28 ಕೇತ್ರಗಳ ಪೈಕಿ ಒಂದರಲ್ಲಿ ಗೆದ್ದಿದ್ದಾರೆ. ಹೀಗಾಗಿ ಮಂಗಳಾ ಅಂಗಡಿ ಗೆದ್ದರೆ ಬೆಳಗಾವಿ ಜಿಲ್ಲೆಯಲ್ಲಿ ಏನೇನು ಕೆಲಸ ಆಗಬೇಕಿದೆ ಅವನ್ನು ಮಾಡಿ ಕೊಡ್ತೇನೆ. ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಈ ಭಾಗದ ಅಭಿವೃದ್ಧಿ ಮಾಡಲಿದ್ದೇನೆ. ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳಬೇಕು ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬರುತ್ತೆ. ಮುಂದಿನ ಯಾವುದೇ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಅದರಲ್ಲಿ ನೀವೇನು ಮಾಡ್ತೀರಿ ಎಂದು ಪ್ರಶ್ನಿಸಿದರು. ರಾಮದುರ್ಗದಲ್ಲಿ ಐವತ್ತು ಸಾವಿರಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿ. ಈ ಕ್ಷೇತ್ರಕ್ಕೆ ನೀವೇನು ಕೇಳ್ತಿರಾ ಅವೆಲ್ಲವನ್ನೂ ಕೊಡ್ತೀನಿ ಎಂದರು.
ಓದಿ: ಕಾಂಗ್ರೆಸ್ ಹತಾಶೆ ಮನೋಭಾವದಿಂದ ಬೊಗಳೆ ಹೊಡೆಯುತ್ತಿದೆ: ಬಿ ವೈ ವಿಜೇಯಂದ್ರ ಆರೋಪ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿಯೂ ಸಿಗುವುದಿಲ್ಲ. ಇನ್ನೊಂದು ಪಕ್ಷದ ಕೈ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಈವರೆಗೂ ಪಶ್ಚಿಮ ಬಂಗಾಳದಲ್ಲಿ ಪ್ರಚಾರಕ್ಕೆ ರಾಹುಲ್ ಗಾಂಧಿ ಹೋಗಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಟಾಂಡ್ ಇಲ್ಲವೇ ಇಲ್ಲ. ಕಾಂಗ್ರೆಸ್ನವರು ಬಿಜೆಪಿ ಹಾಗೂ ಮೋದಿಯನ್ನು ಸೋಲಿಸುವ ಏಕೈಕ ಉದ್ದೇಶ ಇಟ್ಟುಕೊಂಡಿದ್ದಾರೆ. ಅವರಿಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ. ಅವರು ದಾವೂದ್ ಇಬ್ರಾಹಿಂ ಜೊತೆ ಕೈಜೋಡಿಸಲೂ ಹೇಸುವುದಿಲ್ಲ. ಅದು ಭೂತ ಕಾಲದ ಪಾರ್ಟಿ ಎಂದು ಹೇಳಿದರು.
ಪುಲ್ವಾಮಾ ದಾಳಿಯಾದಾಗ ಸರ್ಜಿಕಲ್ ಸ್ಟ್ರೈಕ್ ಮಾಡಿದರು. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರೂಫ್ ಕೇಳುತ್ತಾರೆ. ಇವನೇ ನಿಮ್ಮ ಅಪ್ಪ ಅಂತಾ ನಿಮ್ಮ ಅವ್ವ ಹೇಳಿದ್ರೆ ನೀವು ಒಪ್ಪಬೇಕು. ಅದಕ್ಕೂ ಪ್ರೂಫ್ ಕೊಡೋಕೆ ಆಗಲ್ಲ ಎಂದು ವ್ಯಂಗ್ಯವಾಡಿದರು. ಬಿಜೆಪಿ ಇನ್ನೂ ಇಪ್ಪತ್ತು ವರ್ಷ ದೇಶದಲ್ಲಿ ಅಧಿಕಾರದಲ್ಲಿರುತ್ತದೆ. ಉತ್ತರ ಪ್ರದೇಶದಲ್ಲಿ ಸೈಕಲ್ ಮೂರಾ ಬಟ್ಟೆಯಾಯ್ತು. ಕೈ ಎಲ್ಲಿ ತುಂಡಾಗಿ ಹೋಯ್ತೋ ಗೊತ್ತಿಲ್ಲ. ರಾಹುಲ್ ಗಾಂಧಿ ಕಾಲಿಟ್ಟರೆ ಸಾಕು ಐದಾರು ಲಕ್ಷ ಮತಗಳ ಅಂತರದಿಂದ ಮಂಗಳಾ ಅಂಗಡಿ ಗೆಲ್ಲುತ್ತಾರೆ. ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ, ನಾನ್ ಮುಖ್ಯಮಂತ್ರಿ ಆಗ್ತಿನೋ, ಡಿಕೆಶಿ ಮುಖ್ಯಮಂತ್ರಿ ಆಗ್ತಾರೋ ಎಂದು ಕನಸು ಕಾಣ್ತಿದ್ದಾರೆ ಎಂದರು.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ದಿ. ಸುರೇಶ್ ಅಂಗಡಿಯವರು ನಾಲ್ಕು ಬಾರಿ ಸಂಸದರಾಗಲು ರಾಮದುರ್ಗ ತಾಲೂಕಿನ ಮತದಾರರು ಕೈಹಿಡಿಯುವ ಮೂಲಕ ಅತಿ ಹೆಚ್ಚಿನ ಲೀಡ್ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿಯವರ ನಂಬಿಕೆಗೆ ತಕ್ಕ ರೀತಿ ರೈಲ್ವೆ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದರು. ಧಾರವಾಡ- ಕಿತ್ತೂರು ಮಾರ್ಗದ ರೈಲ್ವೆ ಯೋಜನೆ ತರುವ ಮೂಲಕ ಇಪ್ಪತ್ತು ವರ್ಷಗಳ ಬೇಡಿಕೆ ಈಡೇರಿಸಿದ್ದಾರೆ. 900 ಕೋಟಿ ಅನುದಾನದ ಮಂಜೂರಾತಿ ಕೂಡ ಮಾಡಿಸಿದ್ದಾರೆ. ಇದಲ್ಲದೆ ರಾಜ್ಯಕ್ಕೆ 57 ಸಾವಿರ ಕೋಟಿ ರೂ. ಅನುದಾನ ತಂದಿದ್ದಾರೆ. ಆದರೆ, ದುರ್ದೈವ ಕೊರೊನಾ ಅವರನ್ನು ಬಲಿ ತೆಗೆದುಕೊಂಡಿತು. ಹೀಗಾಗಿ, ಅವರ ಆತ್ಮಕ್ಕೆ ಶಾಂತಿ, ನಿಜವಾಗಿ ಶ್ರದ್ಧಾಂಜಲಿ ದೊರಕಬೇಕಾದರೆ ಉಪಚುನಾವಣೆಯಲ್ಲಿ ದಿ. ಸುರೇಶ್ ಅಂಗಡಿಯವರ ಧರ್ಮಪತ್ನಿ ಮಂಗಳಾ ಅಂಗಡಿಯವರಿಗೆ ಹೆಚ್ಚಿನ ಮತ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ, ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಜವಳಿ ಸಚಿವ ಶ್ರೀಮಂತ್ ಪಾಟೀಲ್, ಸಣ್ಣ ಕೈಗಾರಿಕಾ ಸಚಿವ ಸಿ.ಸಿ.ಪಾಟೀಲ್, ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ, ಶಾಸಕ ಮಹಾದೇವಪ್ಪ ದೊಡವಾಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಸೇರಿದಂತೆ ಹಲವು ನಾಯಕರು ಇದ್ದರು.