ಬೆಳಗಾವಿ : ನಾನು ಶಾಸನಸಭೆಗೆ ಬಂದ್ರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀರಿಳಿಸ್ತೀನಿ ಎಂದು ಸಿಎಂ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆ. ಯಡಿಯೂರಪ್ಪನವರು ದ್ವೇಷ, ಅಸೂಯೆ, ಭ್ರಷ್ಟಾಚಾರದ ದೊರೆ, ಪಕ್ಷಾಂತರದ ಮಹಾಪ್ರಭು. ಕರ್ನಾಟಕದ ಇತಿಹಾಸದಲ್ಲಿ ನಾನು ಇಂತಹ ಸಿಎಂ ನೋಡಿರಲಿಲ್ಲ. ರಾಜ್ಯ ರಾಜಕಾರಣದಲ್ಲಿ ನಾನು ಹಿರಿಯ, ಯಡಿಯೂರಪ್ಪ ನನ್ನ ಜ್ಯೂನಿಯರ್. ಇವರಿಗೆ ರಾಜ್ಯ, ಪ್ರಜಾಪ್ರಭುತ್ವ, ಚಿಂತನೆ ಗೊತ್ತಿಲ್ಲ.
ಶಾಸನಸಭೆಯನ್ನು ಅತ್ಯಂತ ಕೆಳಮಟ್ಟದಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಪಕ್ಷಾಂತರ, ಲೂಟಿ ಮಾಡೋದು ಮಾತ್ರ ಇವರಿಗೆ ಗೊತ್ತು. ಯಡಿಯೂರಪ್ಪ ವರ್ಷಕ್ಕೆ ಒಂದೇ ಸಾರಿ ನಗ್ತಾರೆ. ಮೂರ್ನಾಲ್ಕು ಬಾರಿ ಸಿಎಂ ಆಗಿದ್ದರೂ ಎಂಟು ಸಾರಿ ನಕ್ಕಿರಬಹುದು. ಅವರಲ್ಲಿ ನಗುವ ನರಗಳೇ ಇಲ್ಲ, ಆ ಮಾಂಸ ಖಂಡಗಳೇ ಇಲ್ಲ. ಕೇವಲ ದ್ವೇಷ, ಅಸೂಯೆ ತುಂಬಿಕೊಂಡಿದೆ. ಯಾರನ್ನು ಕಂಡರೂ ದ್ವೇಷ ಪಡುವ ವ್ಯಕ್ತಿ ಕೈಗೆ ನಮ್ಮ ರಾಜ್ಯ ಸಿಕ್ಕಿದ್ದಾರೆ. ಇದು ಸರ್ವಾಧಿಕಾರಿಗಳ ರಾಜ್ಯವಾಗಿದೆ. ಮಂತ್ರಿಗಳಿಗೆ, ಶಾಸಕರಿಗೆ ಯಡಿಯೂರಪ್ಪ ಅವರಿಗೆ ಚಾಲೆಂಜ್ ಮಾಡುವ ತಾಕತ್ತಿಲ್ಲ. 224 ಶಾಸಕರಿಗೆ, ಯಡಿಯೂರಪ್ಪ ಮಂತ್ರಿಮಂಡಲಕ್ಕೆ ವಾಟಾಳ್ ನಾಗರಾಜ್ ಒಬ್ಬರೇ ಸಮ. ನಾನು ಶಾಸನಸಭೆ, ವಿಧಾನಪರಿಷತ್ಗೆ ಬರದೇ ಇರುವ ರೀತಿ ಯಡಿಯೂರಪ್ಪ ಪ್ರಯತ್ನ ಮಾಡ್ತಿದ್ದಾರೆ. ನಾನು ಶಾಸನಸಭೆಗೆ ಬಂದ್ರೆ ಯಡಿಯೂರಪ್ಪನವರಿಗೆ ನೀರು ಇಳಿಸ್ತೀನಿ. ಅದು ಅವರಿಗೆ ಗೊತ್ತು ಎಂದ ವಾಟಾಳ್ ಕೆಂಡಾಮಂಡಲರಾದರು.
ಯಾವುದೇ ಚುನಾವಣೆಗೆ ನಿಂತ್ರು ನನ್ನ ವಿರುದ್ಧ ಶ್ರೀಮಂತ, ಜಾತಿವಾದಿಯನ್ನು ನಿಲ್ಲಿಸಿ ಹಣ ಖರ್ಚು ಮಾಡಿ ಗೆಲ್ಲಿಸ್ತಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಡಿಯೂರಪ್ಪ ಸರ್ಕಾರ ಬಹಳ ಬೇಗ ಹೋಗಬೇಕು. ಕೊರೊನಾ ಸಮಯದಲ್ಲಿ ಲೂಟಿ ಮಾಡಿದ್ದಾರೆ, ದಿನಕ್ಕೆ 150 ಜನ ಸಾಯ್ತಿದ್ದಾರೆ. ಕೊರೊನಾ ಕೈಬಿಟ್ರು, ಯಡಿಯೂರಪ್ಪನವರೇ ನಿಮಗೆ ಗೌರವ ಮರ್ಯಾದೆ ಇದೆಯಾ? ಕರ್ನಾಟಕ ಸಾವಿನ ಮನೆಯಾಗಿದೆ, ನಿಮ್ಮ ಸರ್ಕಾರ ಯಮಲೋಕವಾಗಿದೆ, ನೀವು ಯಮರಾಗಿದ್ದೀರಿ. ಈ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ಬದಲಾವಣೆ ಬೇಕಾ? ಬೆಳಗಾವಿಗೆ ನಾನು ಯಾವಾಗ ಬಂದರೂ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ತಡೆಯಲಾಗುತ್ತೆ. ಅದಕ್ಕೆ ಪೊಲೀಸರ ಕಣ್ತಪ್ಪಿಸಿ ಬಸ್ನಲ್ಲಿ ಸುವರ್ಣಸೌಧ ಬಳಿ ಬಂದೆ. ನಾನು ಎಂದೋ ಸಿಎಂ ಆಗಬಹುದಿತ್ತು, ಮಂತ್ರಿ ಆಗಬಹುದಿತ್ತು. ಹೋರಾಟವೇ ನನ್ನ ಜೀವನ. ಮುಂದಿನ ತಿಂಗಳು ಕನಿಷ್ಠ 15 ದಿವಸ ಬೆಳಗಾವಿಯ ಸುವರ್ಣಸೌಧದಲ್ಲಿ ವಿಶೇಷ ಅಧಿವೇಶನ ಆಗಬೇಕು. ಬೆಳಗಾವಿ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಉತ್ತರ ಕರ್ನಾಟಕ ಶಾಸಕರು ದನ ಕಾಯ್ತಿದ್ದೀರಾ ಎಂದು ವಾಟಾಳ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇದೇ ವೇಳೆ ಬೆಳಗಾವಿ ರಾಜಕಾರಣಿಗಳ ವಿರುದ್ಧ ವಾಟಾಳ್ ನಾಗರಾಜ್ ತೀವ್ರ ವಾಗ್ದಾಳಿ ನಡೆಸಿದರು. ಬೆಳಗಾವಿ ಶಾಸಕರು ಎಲ್ಲಿ ಹೋಗಿದ್ದೀರಿ? ಸಚಿವ ಆಗಬೇಕು, ಒಳ್ಳೆ ಫೋರ್ಟ್ಪೊಲಿಯೋ ಬೇಕೆನ್ನುವ ನೀವು ಸುಮ್ಮನಿರೋದೇಕೆ? ನೀವೆಲ್ಲ ಮರಾಠಿ ಭಾಷಿಕರ ಏಜೆಂಟರು, ಮರಾಠಿಗರ ಗುಲಾಮರು. ಬೆಳಗಾವಿಯ ಎಂಪಿಗಳು, ರಾಜ್ಯಸಭಾ ಸದಸ್ಯರು, ಶಾಸಕರು ಮರಾಠಿ ಹಾಗೂ ಶಿವಸೇನೆ ಗುಲಾಮರಾಗಿದ್ದಾರೆ. ಪೀರನವಾಡಿ ಬಳಿ ಶಿವಾಜಿ ಸರ್ಕಲ್ ಆಗಬಾರದು. ಶಿವಾಜಿ ಸರ್ಕಲ್ ಮಾಡಿದ್ರೆ, ನಾನೇ ಗುದ್ದಲಿ, ಪಿಕಾಸಿ ತಂದು ಒಡೆದು ಹಾಕ್ತೀನಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.