ಬೆಳಗಾವಿ : ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚರ್ಚೆ ನಡೆಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನಗರದ ಬಸ್ತವಾಡ ಗ್ರಾಮದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿದರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮದು ರೈತರ ಪರ ಸರ್ಕಾರ. ರೈತರ ಸಮಸ್ಯೆ ಆಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಯ ನೀಡಿದ್ದಾರೆ. ರೈತರ ವಿವಿಧ ಬೇಡಿಕೆಗಳನ್ನು ಪೂರೈಸಲು ರೈತರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಜ.4 ಅಥವಾ 5ರಂದು ರೈತರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಲಿದೆ ಎಂದು ಹೇಳಿದರು. ಬಳಿಕ ರೈತರು ಪ್ರತಿಭಟನೆ ಮೊಟಕುಗೊಳಿಸಿದರು.
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಸಚಿವರು: ಇನ್ನು ಪ್ರತಿಭಟನಾನಿರತ ರೈತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕಾಗಮಿಸಿ ರೈತರ ಅಹವಾಲು ಸ್ವೀಕರಿಸಿದರು.