ಬೆಳಗಾವಿ :ಕಿತ್ತೂರಿನಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಂಪೂರ್ಣವಾಗಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಬೆಳಗಾವಿ ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಒಟ್ಟು 3,972 ಕೋಟಿ ರೂಪಾಯಿ ವೆಚ್ಚದ 238 ಕಿ.ಮೀ ಉದ್ದದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಅಭಿವೃದ್ಧಿಗೆ ಹೊಸ ಆಯಾಮ ಒದಗಿಸಲಾಗುವುದು. ಬೆಳಗಾವಿ ಸೇರಿದಂತೆ ರಾಜ್ಯದ ಇತರ ಕಡೆಯ ರಿಂಗ್ ರಸ್ತೆಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಿಎಂ ಬೊಮ್ಮಾಯಿ ಮನವಿ ಮಾಡಿಕೊಂಡರು.
ಮಹಾರಾಷ್ಟ್ರದ ಕಾರ್ಮಿಕ ಸ್ಥಳಗಳಾದ ಪಂಢರಾಪುರ, ಶಿರಡಿ ಮತ್ತಿತರ ಧಾರ್ಮಿಕ ಸ್ಥಳಗಳನ್ನು ಕರ್ನಾಟಕ ರಾಜ್ಯದ ಧಾರ್ಮಿಕ ಸ್ಥಳಗಳ ಜತೆ ಜೋಡಿಸಲು ವಿನೂತನ ಯೋಜನೆಯನ್ನು ನಿತಿನ್ ಗಡ್ಕರಿ ಅವರು ರೂಪಿಸಿದ್ದಾರೆ. ಎಲ್ಲ ಸಂಸದರು ತಮ್ಮ ವ್ಯಾಪ್ತಿಯ ಹೆದ್ದಾರಿಗಳು ಮತ್ತಿತರ ರಸ್ತೆ ಅಭಿವೃದ್ಧಿಗೆ ದುಂಬಾಲು ಬೀಳುವ ಮೂಲಕ ಇಡೀ ರಾಜ್ಯಕ್ಕೆ ಅತ್ಯುತ್ತಮ ಯೋಜನೆಗಳನ್ನು ತಂದಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನೆರವಿನಿಂದ ರಾಜ್ಯಕ್ಕೆ ಹಲವಾರು ಯೋಜನೆಗಳು ಲಭಿಸಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಎಸ್ಟಿ ವಿನಾಯಿತಿ ; ಸಿಎಂ ಭರವಸೆ :ರಾಜ್ಯದಲ್ಲಿರುವ ಹೆದ್ದಾರಿಗಳು ಮತ್ತು ರಿಂಗ್ ರಸ್ತೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಜಿಎಸ್ಟಿ ವಿನಾಯಿತಿ, ಭೂಸ್ವಾಧೀನ ಮತ್ತಿತರ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ರಸ್ತೆಗಳು ಅಭಿವೃದ್ಧಿಗೆ ಮಾತ್ರವಲ್ಲ ದೇಶದ ಭಾವೈಕ್ಯತೆಗೆ ಬೆಸುಗೆಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮೂಲಕ ಬೆಳಗಾವಿಯಲ್ಲಿ ರಸ್ತೆ ಸಂಪರ್ಕ ಕ್ರಾಂತಿ ಆಗಲಿದೆ. ಸಚಿವ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ಒಂದೇ ಯೋಜನೆಯಡಿ 58ಕ್ಕೂ ಅಧಿಕ ಮೇಲ್ಸೆತುವೆ ನಿರ್ಮಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಬೃಹತ್ ರಸ್ತೆ ಯೋಜನೆಗಳಿಗೆ ಸಮರ್ಪಕವಾಗಿ ಹಣ ಹೊಂದಿಸುವ ಮೂಲಕ ಮೂಲಸೌಕರ್ಯಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಒಂದು ರಸ್ತೆ ಮೇಲ್ದರ್ಜೆಗೆ ಏರಿಸಲು ವರ್ಷಗಟ್ಟಲೆ ಬೇಕಾಗಿತ್ತು. ಆದರೆ, ಸಚಿವ ನಿತಿನ್ ಗಡ್ಕರಿ ಕಾಲದಲ್ಲಿ ಐದು ಸಾವಿರಕ್ಕೂ ಅಧಿಕ ಕಿ.ಮೀ. ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಓದಿ:ಮಹಾಶಿವರಾತ್ರಿ ಆಚರಣೆಗೆ ಸಜ್ಜಾದ ಗುಮ್ಮಟನಗರಿ ವಿಜಯಪುರ