ಶಿವಾಜಿ ಪ್ರತಿಮೆ ಲೋಕಾರ್ಪಣೆ: ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುವುದಾಗಿ ಸಿಎಂ ಭರವಸೆ ಬೆಳಗಾವಿ : ರಾಜಹಂಸಗಢದಲ್ಲಿ ನಿರ್ಮಾಣವಾಗಿರುವ ಶಿವಾಜಿ ಮಹಾರಾಜರ ಪ್ರತಿಮೆ ಇತಿಹಾಸ ಪರಂಪರೆ ಬಿಂಬಿಸಿದ ಸ್ಥಳವಾಗಿದೆ. ಈ ಹಿಂದೆ ನಾನು ಇಲ್ಲಿಗೆ ಬಂದಿರಲಿಲ್ಲ. ಇವತ್ತು ಇದನ್ನು ನೋಡಿ ತುಂಬಾ ಸಂತೋಷವಾಗಿದೆ. ಈ ಸ್ಥಳಕ್ಕೆ ಶಿವಾಜಿ ಮೂರ್ತಿ ಅತ್ಯಂತ ಕಳೆ ತಂದಿದೆ. ಮುಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಶಿವಾಜಿ ಪ್ರತಿಮೆ ಲೋಕಾರ್ಪಣೆಗೊಳಿಸಿದ ಸಿಎಂ :ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಢದಲ್ಲಿ ನಿರ್ಮಾಣವಾಗಿರುವ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ನೆರವೇರಿಸಿ ತುಂಬಾ ಸಂತೋಷವಾಗಿದೆ. ಪ್ರವಾಸೋದ್ಯಮಕ್ಕೆ ನಮ್ಮ ಸರ್ಕಾರ ಹೆಚ್ಚಿನ ಉತ್ತೇಜನ ನೀಡಿದೆ. ಹೊಯ್ಸಳರು, ಕದಂಬರು ಹಾಗೂ ಮೂಲ ಶಿಲ್ಪಕಲೆ ಇರುವಂತಹ ಸ್ಥಳಗಳನ್ನು ನಾವು ರಕ್ಷಣೆ ಮಾಡುತ್ತೇವೆ. ಜೊತೆಗೆ ಕಾರಿಡಾರ್ ನಿರ್ಮಾಣ ಮಾಡಲು ವಿಶೇಷ ಅನುದಾನವನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.
ಹಲವು ಕಡೆ ಈ ವರ್ಷ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಬರುವ ದಿನಗಳಲ್ಲಿ ಪಿಲಿಗ್ರಿಮ್ ಟೂರಿಸಂಗೆ ಜನ ಬೆಂಬಲ ಕೊಡುತ್ತಾರೆ. ಇಂತಹ ಸ್ಥಳಗಳಿಗೆ ಪ್ರವಾಸ ಮಾಡುವುದಕ್ಕೆ ಜನರು ಇಷ್ಟ ಪಡುತ್ತಾರೆ. ಈ ಸ್ಥಳಗಳಿಗೆ ಬೇಕಾದ ಸೌಕರ್ಯಗಳನ್ನು ಕಲ್ಪಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿ, ಇದರಲ್ಲಿ ಹೊಸದೇನೂ ಇಲ್ಲ. ಮೊದಲಿನಿಂದಲೂ ಅವರು ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಇದರಲ್ಲಿ ಆಶ್ಚರ್ಯ, ವಿಶೇಷ ಏನೂ ಇಲ್ಲ. ಈಗ ಅವರ ಮಾತುಗಳಿಂದ ಬಹಿರಂಗವಾಗಿದೆ ಎಂದು ಪ್ರತಿಕ್ರಿಯಿಸಿದರು.
ಶಿವಾಜಿ ಮೂರ್ತಿ ಉದ್ಘಾಟನೆಗೆ ಸಿಎಂಗೆ ನಾಚಿಕೆ ಆಗಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಅನುದಾನ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. 2013 ರಿಂದ 18 ವರೆಗೆ ಅವರ ಆಡಳಿತವಿತ್ತು. ಈ ಕೋಟೆ ಅಭಿವೃದ್ಧಿಗೆ ಒಂದು ನಯಾಪೈಸೆ ಬಿಡುಗಡೆ ಮಾಡಿದ್ದರೆ, ಮತ್ತೆ ಅವರನ್ನೇ ಕರೆದುಕೊಂಡು ಬಂದು ಇನ್ನೊಮ್ಮೆ ಉದ್ಘಾಟನೆ ಮಾಡಲಾಗುವುದು ಎಂದು ಸವಾಲು ಹಾಕಿದರು. ಒಂದು ನಯಾ ಪೈಸೆ ಕೊಡದೇ ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ಕೊನೆ ಹಂತದ ಕಾಮಗಾರಿಗೆ 50 ಲಕ್ಷ ರೂಪಾಯಿ ನೀಡಿ ಈ ಸ್ಥಳವನ್ನು ಅಭಿವೃದ್ಧಿ ಮಾಡಿದ್ದೇವೆ. ಕೆಲಸ ಮಾಡೋದು ನಾವೇ ಜನರಿಗೆ ಸಮರ್ಪಣೆ ಮಾಡೋದು ನಾವೇ ಎಂದು ಸಿಎಂ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಐದನೇ ತಾರೀಕು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಶಿವಾಜಿ ಮೂರ್ತಿ ಉದ್ಘಾಟಿಸುವ ಬಗ್ಗೆ ಮಾತನಾಡಿದ ಬೊಮ್ಮಾಯಿ, ಇದು ಸರ್ಕಾರ ಮಾಡಿರುವ ಕಾರ್ಯ. ಸರ್ಕಾರಿ ಕಾರ್ಯಕ್ರಮದ ದಿನಾಂಕವನ್ನು ನಾವು ನಿಗದಿ ಮಾಡುತ್ತೇವೆ. ಅವರು ಪಕ್ಷದ ಕಾರ್ಯಕ್ರಮ ಏನಾದರೂ ಮಾಡಲಿ. ನಮಗೂ ಅದಕ್ಕೂ ಸಂಬಂಧ ಇಲ್ಲ. ಈ ಯೋಜನೆಯನ್ನು ಸರ್ಕಾರ ಮಾಡಿದೆ. ಹಣವನ್ನು ಕೂಡ ನಾವೇ ಬಿಡುಗಡೆ ಮಾಡಿದ್ದೇವೆ. ಇದರ ಉದ್ಘಾಟನೆಯ ಸಂಪೂರ್ಣ ಹಕ್ಕು ನಮಗಿದೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಪ್ರತಿಪಾದಿಸಿದರು.
ವೈರಲ್ ವಿಡಿಯೋದಲ್ಲಿ ಏನಿದೆ?ಪ್ರಜಾಧ್ವನಿ ಯಾತ್ರೆಯ ಬಸ್ಸಿನಲ್ಲಿ ಸಂಚರಿಸುತ್ತಾ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಚರ್ಚೆಯಲ್ಲಿ ತೊಡಗಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಮಾತನಾಡುತ್ತಾ, 'ಎಲೆಕ್ಷನ್ ಇರುವ ಕಾರಣ ಅವರು ಕೂಡ ಜನ ಸೇರಸ್ತಾರೆ, 500 ರೂಪಾರಿ ಕೊಟ್ಟು ಕರೆಕೊಂಡು ಬರೋದು ಪ್ರತಿಯೊಬ್ಬರನ್ನು' ಎಂದಿದ್ದಾರೆ. ಆದರೆ 500 ರೂಪಾಯಿ ಕೊಟ್ಟು ಯಾರು ಕರೆದುಕೊಂಡು ಬರಬೇಕು ಎಂಬ ಬಗ್ಗೆ ವಿಡಿಯೋದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಇನ್ನು ಈ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿ, ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದೆ.
ಇದನ್ನೂ ಓದಿ:ಬಿಜೆಪಿಯದ್ದು ವಿಜಯ ಸಂಕಲ್ಪ ಯಾತ್ರೆಯಲ್ಲ, ಕ್ಷಮಾಪಣಾ ಯಾತ್ರೆ: ರಣದೀಪ್ ಸುರ್ಜೇವಾಲಾ