ಎಂಇಎಸ್ ಚಟುವಟಿಕೆ ಬಗ್ಗೆ ಡಿಸಿಗೆ ನಿಗಾ ಇಡುವಂತೆ ಹೇಳುತ್ತೇನೆ: ಸಿಎಂ ಬೆಳಗಾವಿ :ರಾಜಹಂಸಗಡದಲ್ಲಿ ನಿರ್ಮಾಣವಾಗಿರುವ ಶಿವಾಜಿ ಮಹಾರಾಜರ ಪ್ರತಿಮೆ ಅಪವಿತ್ರವಾಗಿದೆ ಎಂದು ಎಂಇಎಸ್ ಮುಖಂಡರು ಕ್ಷೀರಾಭಿಷೇಕ ನಡೆಸಲು ಮುಂದಾಗಿರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಂಇಎಸ್ ಕಾರ್ಯಕರ್ತರು ಶಿವಾಜಿ ಮಹಾರಾಜರ ಪ್ರತಿಮೆಗೆ ಕ್ಷೀರಾಭಿಷೇಕ ನಡೆಸಲು ಮುಂದಾಗಿರುವ ಬಗ್ಗೆ ಬೆಳಗಾವಿ ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾಧಿಕಾರಿ ಗಮನಿಸುತ್ತಾರೆ ಎಂದು ತಿಳಿಸಿದರು.
ಮಾರ್ಚ್ 20ಕ್ಕೆ ಬೆಳಗಾವಿಗೆ ರಾಹುಲ್ ಗಾಂಧಿ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಬರುತ್ತಾರೆ, ಹೋಗುತ್ತಾರೆ. ಇದರಿಂದ ಯಾವುದೇ ತೊಂದರೆ ಇಲ್ಲ ಎಂದರು. ವಿ ಸೋಮಣ್ಣ ದೆಹಲಿ ಪ್ರವಾಸ ವಿಚಾರವಾಗಿ ಮಾತನಾಡಿ, ವಿ ಸೋಮಣ್ಣ ಅವರು ಇಂದು ಬೆಳಗ್ಗೆ ದೆಹಲಿಗೆ ಹೋಗಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬರುತ್ತಾರೆ. ಈ ಬಗ್ಗೆ ಮುಂಚಿತವಾಗಿ ನನ್ನ ಜೊತೆ ಚರ್ಚೆ ಮಾಡಿ ಅವರು ದೆಹಲಿಗೆ ತೆರಳಿದ್ದಾರೆ ಎಂದರು.
ಬಿಜೆಪಿಯಲ್ಲಿ ಟಿಕೆಟ್ಗಾಗಿ ಪೈಪೋಟಿ ವಿಚಾರವಾಗಿ ಮಾತನಾಡಿದ ಸಿಎಂ, ಗೆಲ್ಲೋ ಪಕ್ಷದಲ್ಲಿ ಸಹಜವಾಗಿ ಪೈಪೋಟಿ ಇರುತ್ತದೆ. ಹೀಗಾಗಿ ಪೈಪೋಟಿ ಸಹಜವಾಗಿದೆ. ಪಕ್ಷ ಮತ್ತು ಹೈಕಮಾಂಡ್ ಬಹಳ ಸಮರ್ಥವಾಗಿದೆ. ಎಲ್ಲಾ ಪೈಪೋಟಿಗಳನ್ನು ನಿಭಾಯಿಸಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೋ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಹಲವು ನಾಯಕರು ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ. ಅಸ್ಸೋಂ ಮುಖ್ಯಮಂತ್ರಿಗಳು ಭೇಟಿ ನೀಡಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದಾರೆ. ಕೇಂದ್ರ ಜಲಸಂಪನ್ಮೂಲ ಸಚಿವರು ಬಂದಿದ್ದಾರೆ. ಸಚಿವೆ ಸ್ಮೃತಿ ಇರಾನಿ ಅವರು ಕೂಡ ಆಗಮಿಸಲಿದ್ದಾರೆ. ಹಲವು ನಾಯಕರು ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ನಮ್ಮ ಪಕ್ಷ ಸಂಘಟನೆಯಲ್ಲಿ ತುಂಬಾ ಗಟ್ಟಿಯಾಗಿದೆ. ವಿವಿಧ ಮೋರ್ಚಾಗಳ ಸಮ್ಮೇಳನ, ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ ಮತ್ತು ಹೆಚ್ಚಿನ ಫಲಾನುಭವಿಗಳಿದ್ದಾರೆ. ನಿರಂತರವಾಗಿ ಜನ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಪಕ್ಷ ಸಂಘಟನೆ ಕಾರ್ಯಗಳು ನಡೆಯುತ್ತಿವೆ. ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಇರುವುದರಿಂದ ನಮಗೆ ಸಂಪೂರ್ಣ ವಿಶ್ವಾಸವಿದೆ. ನಾವು ಮತ್ತೆ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ವಿತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದವರಿಗೆ ಅವರದೇ ಆದ ಗ್ಯಾರಂಟಿ ಇಲ್ಲ. ಅದಕ್ಕೆ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಗ್ಯಾರೆಂಟಿ ಕಾರ್ಡ್ ತೆಗೆದುಕೊಂಡು ಜನರು ಉಪ್ಪಿನಕಾಯಿ ಹಾಕಬೇಕಾ? ಅವರು ಅಧಿಕಾರಕ್ಕೆ ಬರುವುದಿಲ್ಲ. ಯಾವ ಯೋಜನೆಯೂ ಅನುಷ್ಠಾನ ಆಗುವುದಿಲ್ಲ. ಅನುಷ್ಠಾನ ಆಗುವಂತ ಕಾರ್ಯಕ್ರಮ ಅಲ್ಲ. ಕೇವಲ ಜನರನ್ನು ಮರಳು ಮಾಡುವಂತಹ ಕೆಲಸ. ಎಲ್ಲಾ ಸಮಯದಲ್ಲೂ ಎಲ್ಲಾ ಜನರನ್ನು ಮೋಸ ಮಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಿಎಂ ಹರಿಹಾಯ್ದರು.
ಇದನ್ನೂ ಓದಿ :ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರದ ಯೋಜನೆ ಜಾರಿ; ಸಿಎಂ ರಾಜೀನಾಮೆ ನೀಡಲಿ: ಡಿಕೆಶಿ