ಬೆಳಗಾವಿ: ಮಾತು ಆಡಿದ್ರೆ ಹೋಯ್ತು. ಮುತ್ತು ಒಡೆದರೆ ಹೋಯ್ತು ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ವಿವಾದಿತ ಹೇಳಿಕೆಯನ್ನು ಹಿಂಪಡೆದು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾತನಾಡುವುದು ಅಷ್ಟೇ ಅಲ್ಲ ಸಮರ್ಥನೆ ಮಾಡುವ ಸಾಹಸ ಮಾಡಿದ್ದಾರೆ. ಈಗ ವಿಷಾದ ವ್ಯಕ್ತಪಡಿಸಿದ್ದೀನಿ ಅನ್ನೋದು ಎಷ್ಟರ ಮಟ್ಟಿಗೆ ಸರಿ?. ತಪ್ಪು ಅನ್ನೋದನ್ನ ಅವರ ಆತ್ಮಸಾಕ್ಷಿಗೆ ಬಿಡುತ್ತೇನೆ. ನನಗೆ ಆಶ್ಚರ್ಯ ಆಗಿರುವಂತದ್ದು ಮಾನ್ಯ ಸತೀಶ್ ಜಾರಕಿಹೊಳಿ ದುಡುಕುವವರಲ್ಲ. ಕಾಂಗ್ರೆಸ್ ಸಹವಾಸದಿಂದ ಕಾಂಗ್ರೆಸ್ ಸಂಸ್ಕೃತಿ ಪ್ರಭಾವದಿಂದ ಹೀಗಾಗಿದೆ ಎಂದರು.
ಕಾಂಗ್ರೆಸ್ ಸಂಸ್ಕೃತಿಯೇ ಯಾವಾಗಲೂ ವಿಭಜಿಸುವ ಶಕ್ತಿಗಳ ಜೊತೆ ಕೈ ಜೋಡಿಸುತ್ತದೆ. ಹಿಂದೂ ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗುವಂತದ್ದು, ಟೆಂಪಲ್ ರನ್ ಮಾಡುವಂತದ್ದು ಸಹಜವಾಗಿ ಅವರು ಎಲ್ಲ ವೋಟ್‌ಬ್ಯಾಂಕ್ ಸಲುವಾಗಿ ಮಾಡ್ತಾರೆ. ಅಲ್ಪಸಂಖ್ಯಾತರ ತುಷ್ಠಿಕರಣ ಜೊತೆಗೆ ವಕ್ಫ್ ಪ್ರಾಪರ್ಟಿಯನ್ನ ಮುಚ್ಚಿದ್ದಾರೆ. ಅಧಿಕಾರಕ್ಕಾಗಿ ಹಿಂದೂಗಳನ್ನ ದ್ವೇಷಿಸುವುದು, ದೂಷಿಸುವುದು ಮಾಡ್ತಿದ್ದಾರೆ.