ಬೆಳಗಾವಿ:ರಾಜ್ಯದ ನೆಲ, ಜಲ ಹಾಗೂ ಜನರ ರಕ್ಷಣೆಗೆ ಸರ್ಕಾರ ಸಿದ್ಧವಿದೆ. ಇದಲ್ಲದೆ ಉತ್ತರ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಕೃಷ್ಣಾ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಂಕೇಶ್ವರ ಪಟ್ಟಣದಲ್ಲಿರುವ ನೇಸರಿ ಗಾರ್ಡನ್ನಲ್ಲಿ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕಾರಣದಲ್ಲಿ ಬಹಳಷ್ಟು ಏಳು-ಬೀಳುಗಳನ್ನು ನೋಡಿದ್ದೇನೆ. ಅಧಿಕಾರ ಶಾಶ್ವತವಲ್ಲ ಅಂದುಕೊಂಡು ಪ್ರತಿದಿನ ಕೆಲಸ ಮಾಡುತ್ತೇವೆ. ಜನ ಎಲ್ಲಿಯವರೆಗೆ ನಮ್ಮನ್ನು ಪ್ರೀತಿ ಮಾಡುತ್ತಾರೋ ಅಲ್ಲಿಯವರೆಗೆ ನಾವು ಅಧಿಕಾರದಲ್ಲಿ ಇರುತ್ತೇವೆ. ಹೀಗಾಗಿ ಜನರ ಹೃದಯದಲ್ಲಿ ಇರುವ ಹಾಗೆ ಕೆಲಸ ಮಾಡಬೇಕು. ಯಾರು ಜನರ ಸಲುವಾಗಿ ರಾಜಕಾರಣ ಮಾಡುತ್ತಾರೆ. ಅವರು ಪ್ರಸ್ತುತವಾಗಿರುತ್ತಾರೆ. ಯಾರೂ ಅಧಿಕಾರ ಆಸೆಗಾಗಿ ರಾಜಕಾರಣ ಮಾಡ್ತಾರೆ ಅವರು ಪ್ರಸ್ತುತವಾಗಿರಲು ಸಾಧ್ಯವೇ ಇಲ್ಲ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಸರ್ಕಾರ ನಡೆಯುತ್ತಿದೆ. ಬಿಎಸ್ವೈ ಸಾಕಷ್ಟು ಯೋಜನೆಗಳಿಗೆ ಅನುಮೋದನೆ ಕೊಟ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ನಾನು ರಿಬನ್ ಕಟ್ಟ ಮಾಡುತ್ತಿದ್ದೇನಷ್ಟೇ. ನಮಗೆ ಯಾರು ಉಪಕಾರ ಮಾಡಿರುತ್ತಾರೋ ಅವರನ್ನು ಸ್ಮರಿಸಬೇಕು ಎಂದರು.
ಜನರ ಸುತ್ತಲೂ ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ಸುತ್ತಲೂ ಜನರು ಓಡಾಡಬೇಕು. ತಾಲೂಕು, ಜಿಲ್ಲಾ ಕಚೇರಿಗಳಿಗೆ ಜನರು ಓಡಾಡೋದನ್ನು ತಪ್ಪಿಸಬೇಕು. ಆ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ಕೊಡುವ ಮೂಲಕ ಜನರ ಮನೆಗೆ ಆಡಳಿತ ತೆಗೆದುಕೊಂಡು ಹೋಗಲಾಗುತ್ತಿದೆ. ನಾನು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆ ಮಾಡಿದ್ದೇನೆ. ಇದುವರೆಗೆ ಯಾವ ರಾಜ್ಯವೂ ಮಾಡದ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿದೆ. ಸೂಕ್ತ ವ್ಯವಸ್ಥೆ ಲಭ್ಯವಾದರೆ ರಾಜ್ಯದಲ್ಲಿ ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ವಿಕೇಂದ್ರೀಕರಣಕ್ಕೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ಸರ್ಕಾರಿ ಸೇವೆಗಳ ವಿಕೇಂದ್ರೀಕರಣ:
ಜನವರಿ 26ರಿಂದ ಐದು ಜಿಲ್ಲೆಗಳಲ್ಲಿ ಸರ್ಕಾರದ ಪ್ರತಿಯೊಂದು ಸೇವೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ನೀಡುವ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಸೇವೆಗಳ ವಿಕೇಂದ್ರೀಕರಣ ಮಾಡುವ ಮೂಲಕ ಜನರ ಮನೆಬಾಗಿಲಿಗೆ ಸೇವೆ ಒದಗಿಸಲಾಗುವುದು. ಇದಕ್ಕೆ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ರೈತರ ಮಕ್ಕಳಿಗೆ ಶಿಷ್ಯವೇತನ ಒದಗಿಸುವ ಮೂಲಕ ಅವರ ಬದುಕಿಗೆ ಆಸರೆಯಾಗಲಿದೆ. ರೈತರ ಮಕ್ಕಳು ಬೇರೆ ಬೇರೆ ರೀತಿಯ ವೃತ್ತಿಶಿಕ್ಷಣ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ. ಅಮೃತ ಯೋಜನೆಗಳ ಜಾರಿ ಮೂಲಕ ಹಳ್ಳಿಗಳ ಪ್ರಗತಿಗೆ ಸರ್ಕಾರ ಮುಂದಾಗಿದೆ ಎಂದರು.
ಏತ ನೀರಾವರಿ ಯೋಜನೆಗಳಿಗೆ ಶೀಘ್ರ ಚಾಲನೆ:
ಶಂಕರಲಿಂಗ ಏತ ನೀರಾವರಿ ಹಾಗೂ ಅಡವಿ ಸಿದ್ಧೇಶ್ವರ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಆರಂಭಿಸಲಾಗುವುದು. ಅದೇ ರೀತಿ ಆರು ಬ್ಯಾರೇಜ್ ತುಂಬಿಸಲು ಆದಷ್ಟು ಬೇಗನೆ ಮಂಜೂರಾತಿ ನೀಡಲಾಗುವುದು. ಪ್ರಧಾನಮಂತ್ರಿಗಳ ದೂರದೃಷ್ಟಿಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಒಟ್ಟಾರೆ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದೇಳಿದರು.
ವಸತಿ ಕಲ್ಪಿಸಲು 50 ಎಕರೆ ಜಮೀನು ಹಸ್ತಾಂತರ: