ಬೆಳಗಾವಿ: ಕಾಂಗ್ರೆಸ್ ಪಕ್ಷ ಸದಾ ದ್ವಿಮುಖ ನೀತಿಯನ್ನು ಪಾಲಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಪಿಸಿದರು. ಸುವರ್ಣವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅನುಮೋದನೆ ಆಗಿದೆ. ಇದಕ್ಕೂ ಮುನ್ನ ಇಡೀ ದಿನ ಚರ್ಚೆಗೆ ಅವಕಾಶಗಳನ್ನು ಕೊಡಲಾಗಿತ್ತು. ಪ್ರತಿಪಕ್ಷ ಕೇವಲ ರಾಜಕೀಯ ಉದ್ದೇಶದಿಂದ ವಿರೋಧಿಸುವ ಕಾರ್ಯ ಮಾಡಿದೆ. ಅವರ ಕಾಲದಲ್ಲಿ ಕಾನೂನು ರಚನೆಗೆ ಎಲ್ಲ ಕ್ರಮ ತೆಗೆದುಕೊಂಡಿದ್ದರು ಎಂದು ವಿವರಿಸಿದರು.
ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಾನೂನು ಸಚಿವರಾಗಿದ್ದ ಟಿಬಿ ಜಯಚಂದ್ರ ಅವರಿಂದ ಪರಿಶೀಲನೆ ಮಾಡಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಹೇಳಿದ್ದರು. ಸಂಪುಟದಲ್ಲಿ ಮಂಡನೆ ಮಾಡಿ ಎಂದರೆ ನಿಮಗೆ ಒಪ್ಪಿಗೆ ಆಯ್ತು ಎಂದು ಅರ್ಥ. ದ್ವಿಮುಖ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಆರ್ಎಸ್ಎಸ್ ಹಿಡನ್ ಅಜೆಂಡಾ ಎಂದರು. ಆದರೆ, ಇದು ಆರ್ಎಸ್ಎಸ್ ಹಿಡನ್ ಅಜೆಂಡಾ ಅಲ್ಲ, ಓಪನ್ ಅಜೆಂಡಾ ಎಂದು ಸಿಎಂ ಹೇಳಿದರು.
ಮತಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧ
ಲಾ ಕಮಿಷನ್ ಶಿಫಾರಸು ಬಂದ ಬಳಿಕ ಕಾನೂನು ರಚನೆ ಮಾಡಲಾಗಿದೆ. ನಿಮಗೆ ಅದನ್ನು ತಿರಸ್ಕಾರ ಮಾಡಲು ಮೂರು ವರ್ಷಗಳ ಕಾಲವಕಾಶ ಇತ್ತು. ಏಕೆ ತಿರಸ್ಕಾರ ಮಾಡಿಲ್ಲ, ತಿರಸ್ಕಾರ ಮಾಡದೆ ಅನುಮೋದನೆ ಕೊಟ್ಟು ಕರಡು ಕಾನೂನನ್ನು ಮಾಡಿ ಸಂಪುಟದ ಮುಂದೆ ಮಂಡಿಸುವವರೆಗೂ ಎಲ್ಲಾ ಪ್ರಕ್ರಿಯೆಗೆ ಸಹಿ ಮಾಡಲಾಗಿದೆ.
ಸಿದ್ದರಾಮಯ್ಯ ಹಾಗೂ ಅಂದಿನ ಕಾನೂನು ಸಚಿವರು ಕೂಡ ಸಹಿ ಮಾಡಿದ್ದಾರೆ. ಈಗ ಅದನ್ನು ವಿರೋಧಿಸುತ್ತೀರಿ. ಏಕೆಂದರೆ ಇದು ರಾಜಕಾರಣ ಮತ್ತು ಮತಬ್ಯಾಂಕ್ ಅಷ್ಟೇ ಎಂದರು.