ಬೆಳಗಾವಿ:ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆ ಇಲ್ಲ ಅಂತ ಹೇಳಿದ್ದಾರೆ. ಅದಕ್ಕಿಂತ ಹೆಚ್ಚು ಏನೂ ಹೇಳಲ್ಲ ಎಂದರು.
861 ಕೋಟಿ ರೂ. ಪರಿಹಾರ:
2019-20ರಲ್ಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಾಗಿ ಸಾಕಷ್ಟು ಬೆಳೆ, ಮನೆಗಳಿಗೆ ಹಾನಿಯಾಗಿತ್ತು. ಪೂರ್ಣ ಬಿದ್ದ ಮನೆಗಳಿಗೆ ಬಿಎಸ್‌ವೈ 5 ಲಕ್ಷ ರೂ. ಘೋಷಣೆ ಮಾಡಿದ್ದರು. ಭಾಗಶಃ ಬಿದ್ದ ಮನೆಗಳ ಎರಡು ಭಾಗ ಮಾಡಿ ಒಂದು ಲಕ್ಷ, ಮೂರು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಮನೆಗಳ ರಿಪೇರಿಗೆ 50 ಸಾವಿರ ರೂ ಪರಿಹಾರ ಘೋಷಿಸಿಸಲಾಗಿತ್ತು. ಬೆಳಗಾವಿ ಜಿಲ್ಲೆಯ 44,205 ಮನೆಗಳಿಗೆ ಈಗಾಗಲೇ ಈಗಾಗಲೇ 861 ಕೋಟಿ ರೂ. ಪರಿಹಾರ ಕೊಟ್ಟಿದ್ದೇವೆ. ಬೆಳೆಹಾನಿಯಾದ 1 ಲಕ್ಷ 63 ಸಾವಿರ ರೈತರಿಗೆ 263 ಕೋಟಿ ರೂ. ನೀಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ಪರಿಹಾರ ಸಿಕ್ಕಿಲ್ಲ. ಈ ಸಂಬಂಧ ನಾನು, ಡಿಸಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಂದು ಸಭೆ ಮಾಡಿದ್ದೇವೆ. ಮುಂದಿನ ವಾರ ಬೆಂಗಳೂರಿಗೆ ಬೆಳಗಾವಿ ಡಿಸಿ ಬರ್ತಾರೆ, ಈ ವೇಳೆ ಚರ್ಚೆ ಮಾಡುತ್ತೇವೆ. ಹಣಕಾಸು ಇಲಾಖೆಯವರ ಜೊತೆ ಚರ್ಚೆ ಮಾಡಿ ಪರಿಹಾರಕ್ಕೆ ಕ್ರಮವಹಿಸುತ್ತೇನೆ ಎಂದು ಹೇಳಿದರು.
ಸ್ವಾಮೀಜಿ ಜೊತೆಗೆ ಸಂಪರ್ಕದಲ್ಲಿದ್ದೇನೆ:
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಅ.1ರಂದು ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ನಿರ್ಧರಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನಾನು ಸ್ವಾಮೀಜಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹಿಂದುಳಿದ ವರ್ಗಗಳ ಆಯೋಗ ವರದಿ ಬಂದ ಮೇಲೆ ಕ್ರಮವಹಿಸುತ್ತೇನೆ. ಅದರ ಪ್ರಗತಿ ಬಗ್ಗೆ ತಿಳಿದುಕೊಂಡು ಮಾತನಾಡ್ತೇನೆ. ಇಂದು ಶ್ರೀಗಳ ಜೊತೆ ಫೋನ್‌ನಲ್ಲಿ ಮಾತನಾಡ್ತೇನೆ. ಸಮಸ್ಯೆಗಳನ್ನು ಎಲ್ಲರೂ ಸೇರಿ ಬಗೆಹರಿಸಬೇಕಿದೆ. ಕಿತ್ತೂರು ಕರ್ನಾಟಕ ಘೋಷಣೆ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ಮಾಡುವುದಾಗಿ ತಿಳಿಸಿದರು.
ನಾಳೆ ಭಾರತ್ ಬಂದ್‌ಗೆ ಕಿಸಾನ್ ಮೋರ್ಚಾ ಕರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ತಾನೇ ಜನರು ಕೋವಿಡ್‌ನಿಂದ ಹೊರಬಂದಿದ್ದು, ಆರ್ಥಿಕ ಚಟುವಟಿಕೆ ನಡೆಸುತ್ತಿದ್ದಾರೆ. ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ, ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ರೈತ ಸಂಘಟನೆಗಳು ಸಹಕಾರ ಮಾಡಬೇಕು. ಕೋವಿಡ್ ಹಿನ್ನೆಲೆ ಬಹಳಷ್ಟು ಆರ್ಥಿಕ ಚಟುವಟಿಕಗಳು ನಿಂತು ಹೋಗಿದೆ. ಈಗ ಪ್ರಾರಂಭ ಆಗಿದೆ. ಇದಕ್ಕೆ ಅನುವು ಮಾಡಿಕೊಡಬೇಕು ಎಂದು ರೈತರಿಗೆ ಸಿಎಂ ಮನವಿ ಮಾಡಿದರು.