ಬೆಳಗಾವಿ: ಝಾನ್ಸೀರಾಣಿ ಲಕ್ಷ್ಮೀಬಾಯಿ 1857ರಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದಾರೆ. ಆದರೆ, ವೀರರಾಣಿ ಕಿತ್ತೂರು ಚೆನ್ನಮ್ಮ ಅದಕ್ಕೂ ಮೊದಲೇ 1824ರಲ್ಲಿ ಬ್ರಿಟೀಷರ ವಿರುದ್ದ ಹೋರಾಟ ಮಾಡಿದ್ದಾರೆ. ಈ ಸತ್ಯವನ್ನು ಪ್ರಕಟಣೆ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೂಡ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಿತ್ತೂರು ರಾಜ್ಯಮಟ್ಟದ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಿನ್ನೆಯಿಂದ ಕಿತ್ತೂರು ಉತ್ಸವ ಚಾಲನೆ ನೀಡಬೇಕಿತ್ತು. ನಮ್ಮಲ್ಲೆರ ದುರ್ದೈವ. ನಮ್ಮೆಲ್ಲರ ಸಹೋದರ ಆನಂದ ಮಾಮನಿ ನಿಧನ ಹೊಂದಿ ಹಿನ್ನೆಲೆಯಲ್ಲಿ ಒಂದು ದಿನ ವಿಳಂಬವಾಗಿ ಇಂದು ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.
ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಕಿತ್ತೂರು ಚೆನ್ನಮ್ಮ: ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿದ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ. 1824 ಅಕ್ಟೋಬರ್ 21 ಭಾರತದಲ್ಲಿ ಎಂದೂ ಮರೆಯಲಾಗದ ದಿನವಾಗಿದೆ. ಬ್ರಿಟೀಷರ ವಿರುದ್ಧ ಧ್ವನಿ ಎತ್ತುವ ಧೈರ್ಯ ಆ ಸಮಯದಲ್ಲಿ ಯಾರಿಗೂ ಇರಲಿಲ್ಲ.ಕಿ ತ್ತೂರು ಚೆನ್ನಮ್ಮ ಬರೀ ಧ್ವನಿ ಅಷ್ಟೆ ಅಲ್ಲಾ ತಲೆ ಎತ್ತಿ ಹೋರಾಡಿದ್ದರು. ಇದನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕು ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ಮೊದಲನೇ ಯುದ್ದದಲ್ಲಿ ಜಯ ಸಾಧಿಸಿ ವಿಜಯೋತ್ಸವ ಮಾಡಿದರು. ಅದರ ಸವಿನೆನಪಿಗಾಗಿ ಇವತ್ತು ಕಿತ್ತೂರು ಉತ್ಸವ ಮಾಡಲಾಗುತ್ತಿದೆ. ಕಿತ್ತೂರು ರಾಣಿ ಚೆನ್ನಮ್ಮ ಹೋರಾಟದ ಇತಿಹಾಸ ಮೆಲಕು ಹಾಕಿದ ಸಿಎಂ ಬೊಮ್ಮಾಯಿ, ಕಿತ್ತೂರು ಚೆನ್ನಮ್ಮ ಅಂದ್ರೇ ಮೈಯಲ್ಲಿರುವ ಕೂದಲು ಎದ್ದು ನಿಲ್ಲುತ್ತದೆ. ಅದು ಚೆನ್ನಮ್ಮನ ಶಕ್ತಿ. ಸಮಸ್ಯೆ, ಸವಾಲುಗಳನ್ನು ಎದುರಿಸಿ ಹಿಮ್ಮೆಟ್ಟಿ ಜಯಸಾಧಿಸಿ ಕೆಲಸ ಮಾಡುವುದು ನಮ್ಮ ಧರ್ಮವಾಗಿದೆ. ಅದರಿಂದ ಹಿಂದೆ ಸರಿದರೆ ಅದು ಸಾರ್ಥಕತೆ ಆಗಲ್ಲ. ಬಾಹ್ಯವಾಗಿ, ಆಂತರಿಕವಾಗಿ ದೇಶದ ಅಖಂಡತೆ ಕಾಪಾಡುವುದು ಬಹಳ ಮುಖ್ಯವಾಗಿದೆ. ಸುದೈವವಾಗಿ ನಮ್ಮ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಇದ್ದಾರೆ. ಉಗ್ರವಾದ ಧಮನ ಮಾಡಿದ್ದಾರೆ. ಅಮೆರಿಕ, ಯೂರೋಪ್ ಎಲ್ಲ ದೇಶಗಳಲ್ಲಿ ಆರ್ಥಿಕ ಕಂಟಕ ಬಂದಿದೆ. ಆದರೆ ಭಾರತಕ್ಕೆ ಬಂದಿಲ್ಲ. ನರೇಂದ್ರ ಮೋದಿಜಿ ಆಡಳಿತದಲ್ಲಿ ಕಿತ್ತೂರು ರಾಣಿ ಚೆನ್ನಮ್ಮರ ಧೈರ್ಯ, ಮುಂದಾಲೋಚನೆಯ ಆಡಳಿತ ಇದೆ. ಕಿತ್ತೂರು ಬಗ್ಗೆ ಎಷ್ಟು ಅಭಿಮಾನ ಪಡುತ್ತಿದ್ದೇವೆ ಅಷ್ಟೇ ಅಭಿವೃದ್ಧಿ ಅವಶ್ಯಕತೆ ಇದೆ ಎಂದರು.
ಕಿತ್ತೂರು ಅಭಿವೃದ್ಧಿಗೆ ಬದ್ಧ: ಈ ಭಾಗದ ನೀರಾವರಿ ಯೋಜನೆಗೆ 580 ಕೋಟಿ ರೂಪಾಯಿ ಪಡೆದಿದ್ದಾರೆ. ಎಲ್ಲ ಊರಿಗೆ ಕುಡಿಯುವ ನೀರು ಪೂರೈಕೆಗೂ ಪ್ರಧಾನಿಯವರ ಜಲಜೀವನ್ ಮಿಷನ್ ಯೋಜನೆ ಅನುಕೂಲವಾಗಿದೆ. ಕಿತ್ತೂರು, ಬೈಲಹೊಂಗಲ, ಖಾನಾಪುರ, ಸವದತ್ತಿ ಸೇರಿ 980 ಕೋಟಿ ರೂ ನೀಡಿದ್ದೇವೆ ಎಂದು ಇದೇ ವೇಳೆ ಹೇಳಿದರು.
ಚೆನ್ನಮ್ಮ ಅರಮನೆ ನಿರ್ಮಾಣಕ್ಕೆ ನಮ್ಮ ನಾಯಕ ಬಿಎಸ್‌ವೈ 50 ಕೋಟಿ ಕೊಟ್ಟಿದ್ದರು. ನಾವು ಈಗ ಅದನ್ನು 115 ಕೋಟಿ ರೂ ಮಾಡಿದ್ದೇವೆ. ಭೂಸ್ವಾಧೀನಕ್ಕೆ ಎಷ್ಟು ಖರ್ಚು ಬರುತ್ತೋ ಅದನ್ನು ಕೊಟ್ಟು ಅರಮನೆಯ ಪಕ್ಕದಲ್ಲೇ ಕೋಟೆ ನಿರ್ಮಾಣ ಮಾಡುತ್ತೇವೆ. ಮೂಲ ಚೆನ್ನಮ್ಮ ಕೋಟೆ ಅಭಿವೃದ್ಧಿಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 27ಕೋಟಿ ರೂಪಾಯಿ ನೀಡಲಾಗಿದೆ. ಕಿತ್ತೂರು ಬಳಿಯ ಕೆಐಎಡಿಬಿ ಯೋಜನೆಯಲ್ಲಿ ಒಂದು ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದ್ದೇವೆ. ಅಲ್ಲಿ ಕನಿಷ್ಟ 50 ಸಾವಿರ ಯುವಕರಿಗೆ ಕೆಲಸ ಸಿಗಬೇಕೆಂಬ ಅಭಿಲಾಷೆ ನಮ್ಮದಾಗಿದೆ ಎಂದರು.
ಧಾರವಾಡ - ಕಿತ್ತೂರು - ಬೆಳಗಾವಿ ರೈಲು ಕಾಮಗಾರಿಗೆ ಕೇಂದ್ರ ಒಪ್ಪಿಗೆ ಕೊಟ್ಟಿದೆ. ಭೂಸ್ವಾಧೀನ ಮಾಡಿ ಆದಷ್ಟು ಬೇಗ ಮಾಡುವುದಾಗಿ ಭರವಸೆ ಕೊಡುತ್ತೇನೆ. ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ. ನಿಮ್ಮೆಲ್ಲರ ಆಶೀರ್ವಾದ, ಚೆನ್ನಮ್ಮ ಆಶೀರ್ವಾದದಿಂದ ಎರಡು ನೀರಾವರಿ ಯೋಜನೆಗೆ ಅನುಮತಿ ಪಡೆಯಬೇಕಿದೆ. ಕೃಷ್ಣ ಮೇಲ್ದಂಡೆ ಸ್ಟೇಜ್ 3ಯೋಜನೆ ಅಪ್ರೂ ಮಾಡಿಸಿ ಆಲಮಟ್ಟಿ ಆಣೆಕಟ್ಟು ಎತ್ತರಕ್ಕೆ ಕ್ರಮಕೈಗೊಳ್ಳಲಾಗಿದೆ. ಆದಷ್ಟು ಬೇಗ ಕಳಸಾ ಬಂಡೂರಿ ಯೋಜನೆಗೂ ಚಾಲನೆ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುವರ್ಣ ಸೌಧದ ಮುಂಭಾಗದಲ್ಲಿ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ನವೆಂಬರ್ ತಿಂಗಳಲ್ಲಿ ಬಂದು ನಾನೇ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ಮಾಡುತ್ತೇನೆ. ಬೈಲಹೊಂಗಲದ ರಾಣಿ ಚೆನ್ನಮ್ಮ ಸಮಾಧಿಗೆ 2 ಕೋಟಿ ರೂಪಾಯಿ ಹಣ ಬಿಡುಗಡೆ ಹಾಗೂ ರಾಣಿ ಬೆಳವಡಿ ಮಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದರು.
ಕಿತ್ತೂರು ಉತ್ಸವವನ್ನು ಉದ್ಘಾಟಿಸಿದ ಬೊಮ್ಮಾಯಿ : ಇದಕ್ಕೂ ಮೊದಲು ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿ ಹಮ್ಮಿಕೊಂಡ 2022ರ ರಾಜ್ಯಮಟ್ಟದ ಕಿತ್ತೂರು ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕಿತ್ತೂರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕಿತ್ತೂರು ಬಿಜೆಪಿ ಕಾರ್ಯಾಲಯ ಉದ್ಘಾಟನೆ ಮಾಡಿ, ಬಳಿಕ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಕಿತ್ತೂರು ಆಡಳಿತ ಸೌಧ ಉದ್ಘಾಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ,ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ,ಕಿತ್ತೂರು ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ, ಎಂಎಲ್‌ಸಿ ಸಾಬಣ್ಣ ತಳವಾರ ಹಾಗೂ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ,ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ಚಾಮೀಜಿ ಉಪಸ್ಥಿತರಿದ್ದರು.
ಇದನ್ನೂ ಓದಿ :ಪ್ರತಿ ಗ್ರಾಮದ 2 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂ ಸಾಲ ಸೌಲಭ್ಯ: ಸಿಎಂ ಬೊಮ್ಮಾಯಿ