ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾನು ಕಂಕಣಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯ ಕೆ.ಎಲ್.ಇ ಸಂಸ್ಥೆ ಆಯೋಜಿಸಿದ್ದ ವಾಯುವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸೂಕ್ತ ಅಭ್ಯರ್ಥಿಗಳನ್ನು ಪ್ರತಿನಿಧಿಗಳಾಗಿ ಆಯ್ಕೆ ಮಾಡಿ ಕಳುಹಿಸಿದರೆ ಅವರ ಸಲಹೆ ಸೂಚನೆಗಳನ್ನು ಪಡೆದು ಉತ್ತಮವಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಆದ್ದರಿಂದ ಮೊದಲನೇ ಪ್ರಾಶಸ್ತ್ಯದ ಮತವನ್ನು ಅರುಣ್ ಶಹಾಪುರ ಹಾಗೂ ಹನಮಂತ ನಿರಾಣಿಗೆಗೆ ನೀಡಬೇಕು. ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ನಿಮ್ಮನ್ನು ನಾವು ನಿರಾಸೆಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ರಾಜ್ಯಕ್ಕೆ ಕೆಎಲ್ಇ ಕೊಡುಗೆ ಅಪಾರ : ಕರ್ನಾಟಕದ ಅಭಿವೃದ್ಧಿಯಲ್ಲಿ ಮೈಸೂರು ಮಹಾರಾಜರ ಯೋಜನೆಗಳು ಹಾಗೂ ಉತ್ತರ ಕರ್ನಾಟಕದಲ್ಲಿನ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಬೆಳಗಾವಿಯ ಕೆ.ಎಲ್.ಇ ಸೊಸೈಟಿಯ ಕೊಡುಗೆ ಅಪಾರವಾದುದು. ಯಾವ ಸಮಾಜದಲ್ಲಿ ಶಿಕ್ಷಣವಿರುತ್ತದೆಯೋ ಅದು ಬೆಳೆಯುತ್ತದೆ. ಶಿಕ್ಷಣ ಮತ್ತು ಜ್ಞಾನದಿಂದ ಮಾತ್ರ ಒಂದು ಸಂಸ್ಕಾರ ಭರಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಕೆಎಲ್‍ಇ ಸೊಸೈಟಿಗೆ ಬಹಳ ದೊಡ್ಡ ಇತಿಹಾಸವಿದೆ. ಚುನಾಯಿತ ಅಧ್ಯಕ್ಷರಾಗಿರುವ ಪ್ರಭಾಕರ ಕೋರೆ ಅವರ ಸ್ಥಾನ ಅತ್ಯಂತ ಗೌರವಯುತವಾದದ್ದು. ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಕೆಎಲ್‍ಇ ಸಂಸ್ಥೆಯ ಅಭಿವೃದ್ಧಿಯ ಪಯಣ ಇನ್ನೂ ಮುಂದುವರೆದಿದೆ. 34 ಸಂಸ್ಥೆಗಳಿದ್ದ ಸೊಸೈಟಿ ಇದೀಗ ಮೂರು ದಶಕಗಳಲ್ಲಿ 278 ಸಂಸ್ಥೆಗಳಾಗಿವೆ. ಇದೊಂದು ವಿಶ್ವ ದಾಖಲೆ. ಈ ದೇಶದ ಗಡಿದಾಟಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಇದು ಶಿಕ್ಷಣದಲ್ಲಿ ನಾಯಕತ್ವವನ್ನು ತೋರಿಸುತ್ತದೆ. ಪ್ರಭಾಕರ ಕೋರೆಯಂತಹವರು ನೂರಾರು ಜನ ಬಂದರೆ ಈ ದೇಶದ ಶೈಕ್ಷಣಿಕ ಕ್ಷೇತ್ರದ ಚಿತ್ರಣವೇ ಬದಲಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.
ವೈಜ್ಞಾನಿಕ ಚಿಂತನೆಯುಳ್ಳ ಸಮಾಜದ ನಿರ್ಮಾಣ ಶೈಕ್ಷಣಿಕ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ. ಮುಂದಿನ ಪೀಳಿಗೆಗೆ ಈ ಸಂಸ್ಥೆ ಹೇಗೆ ಬೆಳೆಯಬೇಕು ಎಂದು ತಿಳಿಯುವ ಸಲುವಾಗಿ ವಿದ್ಯಾರ್ಥಿಗಳು ಸಂಶೋಧನೆ ಮಾಡಬೇಕು. ಪ್ರಭಾಕರ ಕೋರೆಯವರು ಸೊಸೈಟಿಯ ವಿಚಾರದಲ್ಲಿ ಮಾತೃಹೃದಯದ ಅಧ್ಯಕ್ಷರಾಗಿ ಅದ್ಬುತ ಸೇವೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.