ಚಿಕ್ಕೋಡಿ: ಕರ್ನಾಟಕ - ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಅಣ್ಣ - ತಮ್ಮಂದಿರ ತರ ಇದ್ದಾರೆ. ಆದರೆ, ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಒಂದಿಲ್ಲೊಂದು ಪುಂಡಾಟಿಕೆ ಪ್ರದರ್ಶನ ಮಾಡುತ್ತಿರುವುದರಿಂದ ಗಡಿ ಭಾಗದ ಜನರು ತೊಂದರೆ ಅನುಭವಿಸುವಂತಹ ಪ್ರಸಂಗ ಎದುರಾಗಿದೆ.
ಗುರುವಾರ ಮಹಾರಾಷ್ಟ್ರದ ಕೊಲ್ಲಾಪುರದ ಸುಪ್ರಸಿದ್ಧ ಮಹಾಲಕ್ಷ್ಮಿ ಯಾತ್ರಿ ನಿವಾಸದ ಕಟ್ಟಡ ಮೇಲಿದ್ದ ಕನ್ನಡ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ಶಿವಸೇನೆ ಪುಂಡರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಬೋರ್ಡ್ ಇರುವ ಮಳಿಗೆಗಳ ಮಾಲೀಕರಿಗೆ ಕನ್ನಡ ಬೋರ್ಡ್ ಹಾಕಿದರೆ ವ್ಯಾಪಾರ ಮಾಡಲು ಬಿಡಲ್ಲ ಎಂದು ಅಂಗಡಿಗಳ ಮಾಲೀಕರಿಗೆ ಕೊಲ್ಲಾಪುರ ಶಿವಸೇನೆ ಮುಖಂಡ ಸಂಜಯ್ ಪವಾರ್ ಬೆದರಿಕೆ ಹಾಕಿದ್ದಾರೆ.
ಶಿವಸೇನೆ ಪುಂಡರಿಂದ ಮುಂದುವರಿದ ಪುಂಡಾಟಿಕೆ:
ಐತಿಹಾಸಿಕ ದೇವಸ್ಥಾನಕ್ಕೆ ಕರ್ನಾಟಕದಿಂದ ಲಕ್ಷಾಂತರ ಭಕ್ತರೂ ಹೋಗುತ್ತಾರೆ. ದೇವಸ್ಥಾನದ ಬಳಿ ಬಹುತೇಕ ಮಳಿಗೆಗಳ ಹೆಸರುಗಳು ಕನ್ನಡದಲ್ಲಿವೆ. ಅಲ್ಲಿಯೂ ಶಿವಸೇನೆ ಭಾಷಾ ರಾಜಕಾರಣ ಮಾಡಿ ಪುಂಡಾಟಿಕೆಗೆ ಪ್ರದರ್ಶನ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಕೊಗನೋಳಿ ಚೆಕ್ ಪೋಸ್ಟ್ ಬಳಿ ಶಿವಸೇನಾ ಕಾರ್ಯಕರ್ತರು, ಬೆಳಗಾವಿಯಲ್ಲಿ ನಡೆಯುತ್ತಿದ್ದ ಎಂಇಎಸ್ ಪ್ರತಿಭಟನೆಯಲ್ಲಿ ಭಾಗಿಯಾಗಲು ಬರುತ್ತಿರುವಾಗ ಬೆಳಗಾವಿ ಪೊಲೀಸರು ತಡೆದು ಮರಳಿ ಕಳುಹಿಸಿದ್ದ ಘಟನೆ ನಡೆದಿತ್ತು. ಈ ಹಿಂದೆ ಮರಾಠಿ ಭಾಷೆಯಲ್ಲಿ ಲಾರಿ ಚಾಲಕ ಮಾತನಾಡದೇ ಇರುವುದಕ್ಕೆ ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು. ಈಗ ಮತ್ತೆ ಪುಂಡಾಟಿಕೆ ಪ್ರಾರಂಭಿಸಿರುವ ಶಿವಸೇನೆ ಮಹಾರಾಷ್ಟ್ರದಲ್ಲಿರುವ ಕನ್ನಡ ಬೊರ್ಡ್ಗಳನ್ನು ತೆರವು ಮಾಡಲು ಮುಂದಾಗಿದೆ.