ಬೆಳಗಾವಿ :ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಮಹಾನಗರ ಪಾಲಿಕೆ ಕಚೇರಿ ಎದುರಿಗೆ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಹೆಚ್ ಅವರಿಗೆ ಮನವಿ ಮಾಡಿಕೊಂಡ ಸಂಘದ ಪದಾಧಿಕಾರಿಗಳು, ಕಳೆದ 3 ದಿನಗಳ ಹಿಂದೆ ಸಾವನ್ನಪ್ಪಿದ ಪೌರ ಕಾರ್ಮಿಕರ ಕುಟುಂಬದವರಿಗೆ ತ್ವರಿತ ಪರಿಹಾರ ಘೋಷಣೆ ಮಾಡಬೇಕು. ಮೃತ ಕುಟುಂಬದ ಸದಸ್ಯರಿಗೊಬ್ಬರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕೆಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಸುವಂತೆ ಪೌರ ಕಾರ್ಮಿಕರ ಪ್ರತಿಭಟನೆ ಪೌರ ಕಾರ್ಮಿಕರ ಜೀವ ಹಾಗೂ ಆರೋಗ್ಯ ರಕ್ಷಣೆ ಕುರಿತು ಸರ್ಕಾರದ ಯೋಜನೆಗಳನ್ನು ಪೌರ ಕಾರ್ಮಿಕರಿಗೆ ನೇರವಾಗಿ ತಲುಪಲು ಸೂಕ್ತ ಕ್ರಮಕೈಗೊಳ್ಳಬೇಕು. ನಿಗದಿತ ಅವಧಿಯ ಸಂಬಳ ನೀಡಬೇಕು. ಕಾರ್ಮಿರ ಮೇಲೆ ಗುತ್ತಿಗೆದಾರರಿಂದಾಗುವ ಶೋಷಣೆ ತಪ್ಪಿಸುವ ಮೂಲಕ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪೌರ ಕಾರ್ಮಿಕರು ಉಪಯೋಗಿಸುತ್ತಿರುವ ಹಳೆಯದಾದ ಕಸ ವಿಲೇವಾರಿ ವಾಹನಗಳನ್ನು ಬದಲಾಯಿಸಬೇಕು. ಇದಲ್ಲದೇ ಪೌರಕಾರ್ಮಿಕರ ಕುರಿತು ಸರ್ಕಾರದ ಯೋಜನೆಗಳು ಕೇವಲ ಕಾಗದದ ಹಾಳೆಯಲ್ಲಿದ್ದು, ವಾಸ್ತವಿಕವಾಗಿ ಈ ಯೋಜನೆಗಳನ್ನು ಪೌರಕಾರ್ಮಿಕರಿಗೆ ತಲುಪಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಮಾಡಬೇಕಿದೆ ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತರು ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು. ಆದರೂ ಜಗ್ಗದ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಸುವರೆಗೂ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದರು.