ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆಗ್ರಹ ಬೆಳಗಾವಿ:ಇಲ್ಲಿನಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಹೀಗಾಗಿ ಮಕ್ಕಳು ಪರದಾಡುವಂತಾಗಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಖುರ್ದ್ ಗ್ರಾಮದ ಸರ್ಕಾರಿ ಶಾಲೆಯ ದುಸ್ಥಿತಿ ಇದು. ಶೌಚಕ್ಕೆ ಹೋಗಬೇಕಾದರೆ ಮಕ್ಕಳು ಸರತಿ ಸಾಲಿನಲ್ಲಿ ನಿಲ್ಲಬೇಕು. ಕಳೆದ ಕೆಲವು ವರ್ಷಗಳಿಂದ ಮಕ್ಕಳು ನಿತ್ಯ ಈ ಸಂಕಷ್ಟ ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸದೇ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಂಗ್ರಾಳಿ ಖುರ್ದ ಗ್ರಾಮದಲ್ಲಿ 1986ರಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪರಿಂದ ಈ ಶಾಲೆ ಸ್ಥಾಪನೆಯಾಗಿದೆ. 1ರಿಂದ 8ನೇ ತರಗತಿಯವರಗೆ ಒಟ್ಟು 354 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಮಂದಿ ಶಿಕ್ಷಕರಿದ್ದಾರೆ. 16 ಕೊಠಡಿಗಳಿವೆ.
ಮರಾಠಿ ಭಾಷೆಯ ಪ್ರಾಬಲ್ಯವಿರುವ ಈ ಭಾಗದಲ್ಲಿ ಕನ್ನಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದರೂ ಶೌಚಕ್ಕೆ ವಿದ್ಯಾರ್ಥಿಗಳು ಪರದಾಡಬೇಕು. ಒಂದೆಡೆ ಬಾಲಕಿಯರ ಸರತಿ ಸಾಲು, ಇನ್ನೊಂದೆಡೆ ಬಾಲಕರ ಸಾಲು. ಒಮ್ಮೊಮ್ಮೆ ಶೌಚಾಲಯದ ಹೊರಗಡೆ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದ್ದೂ ಇದೆ ಅಂತಾರೆ ವಿದ್ಯಾರ್ಥಿಗಳು.
'ಈಟಿವಿ ಭಾರತ' ಜೊತೆಗೆ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ವಿನಾಯಕ್ ಕೋಲಕಾರ, "ಬೇರೆ ಶಾಲೆಗಳಿಗೆ ಹೋಲಿಸಿದರೆ ನಮ್ಮ ಶಾಲೆ ತುಂಬಾ ಹೀನಾಯ ಸ್ಥಿತಿಯಲ್ಲಿದೆ. 354 ವಿದ್ಯಾರ್ಥಿಗಳಿಗೆ ಕೇವಲ ಮೂರೇ ಮೂರು ಶೌಚಾಲಯಗಳಿವೆ. ಹೆಚ್ಚುವರಿಯಾಗಿ ಶೌಚಾಲಯ ನಿರ್ಮಿಸುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಮಕ್ಕಳು ಪಾಠ ಬಿಟ್ಟು ಶೌಚಕ್ಕಾಗಿಯೇ ಅರ್ಧ ಗಂಟೆಯಿಂದ ಒಂದು ಗಂಟೆ ಕ್ಯೂ ಹಚ್ಚಿ ಕಾಯಬೇಕಿದೆ. ತಕ್ಷಣವೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ" ಎಂದು ಎಚ್ಚರಿಸಿದರು.
ಶೌಚಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ಮಕ್ಕಳು ಶಾಲೆಯ ಮುಖ್ಯೋಪಾಧ್ಯಾಯರ ಪ್ರತಿಕ್ರಿಯೆ:"ಈ ಬಗ್ಗೆಗ್ರಾ.ಪಂ, ತಾ.ಪಂನವರಿಗೆ ಮನವಿ ಸಲ್ಲಿಸಿದ್ದೇವೆ. ಹಣ ಮಂಜೂರಾಗಿದೆ. ಶೌಚಾಲಯ ಕಟ್ಟಿ ಕೊಡುತ್ತೇವೆ ಎಂದಿದ್ದಾರೆ. ಇಲ್ಲಿ ಶೌಚಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಮಯ ವ್ಯಯಿಸಬೇಕಿದೆ. ಹಾಗಾಗಿ ಆದಷ್ಟು ಬೇಗ ಶೌಚಾಲಯ ನಿರ್ಮಿಸಿಕೊಟ್ಟರೆ ತುಂಬಾ ಅನುಕೂಲ ಆಗುತ್ತದೆ" ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾದೇವ ಅಥಣಿ ಹೇಳಿದರು.
ಹೆಚ್ಚುವರಿ ಪ್ರಭಾರ ಡಿಡಿಪಿಐ ಮೋಹನಕುಮಾರ ಹಂಚಾಟೆ ಅವರನ್ನು 'ಈಟಿವಿ ಭಾರತ' ಸಂಪರ್ಕಿಸಿದಾಗ, "ಶೌಚಾಲಯ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿದೆ. ಮಕ್ಕಳಿಗೆ ಶೌಚಾಲಯ ಸಮಸ್ಯೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡುತ್ತೇನೆ. ಶೀಘ್ರವೇ ಹೆಚ್ಚುವರಿಯಾಗಿ ಎರಡು ಶೌಚಾಲಯ ನಿರ್ಮಾಣಕ್ಕೂ ನಿರ್ದೇಶನ ನೀಡುತ್ತೇನೆ" ಎಂದರು.
ಇದನ್ನೂ ಓದಿ:ಮುಖ್ಯ ಶಿಕ್ಷಕರಿಂದಲೇ ಶಾಲೆಯ ಶೌಚಾಲಯ ಸ್ವಚ್ಛತೆ.. ಮಕ್ಕಳಿಗೆ ಶುಚಿ ಪಾಠ