ಚಿಕ್ಕೋಡಿ (ಬೆಳಗಾವಿ): ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯಲ್ಲಿ ಮಹಾ ಪುರುಷರ ಪ್ರತಿಮೆ ಅನಾವರಣ ಮಾಡುವುದೇ ಒಂದು ದೊಡ್ಡ ರಾಜಕೀಯ ದಾಳವಾಗಿ ಪರಿಣಮಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕಿತ್ತಾಟ ಆರಂಭವಾಗಿದೆ.
ಚಿಕ್ಕೋಡಿ ಪಟ್ಟಣದ ರಾಣಿ ಚೆನ್ನಮ್ಮ ರಸ್ತೆಯಲ್ಲಿ ಚನ್ನಮ್ಮ ಮೂರ್ತಿಯನ್ನು ಅನಾವರಣಗೊಳಿಸಲು ಬಿಜೆಪಿ ನಾಯಕ ಮಾಜಿ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಇದೇ 16 ನೇ ತಾರೀಕಿನಂದೂ ಚಿಕ್ಕೋಡಿ ವರ್ತಕರ ಸಂಘ ಹಾಗೂ ಕವಟಗಿಮಠ ಟ್ರಸ್ಟ್ ವತಿಯಿಂದ ಚನ್ನಮ್ಮ ಮೂರ್ತಿ ಅನಾವರಕ್ಕೆ ತಯಾರಿ ನಡೆಸಲಾಗಿದೆ. ಆದರೆ, ಇದಕ್ಕೆ ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವರು ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಜಿಲ್ಲಾಧಿಕಾರಿ ಮೂಲಕ ಮೂರ್ತಿ ಸ್ಥಾಪನೆಗೆ ವಿರೋಧ ಮಾಡುತ್ತಿದ್ದಾರೆ ಎಂದು ಮಹಾಂತೇಶ ಕವಟಗಿಮಠ ಗಂಭೀರ ಆರೋಪ ಮಾಡಿದ್ದಾರೆ.
‘‘40 ವರ್ಷಗಳ ಹಿಂದೆ ನಿರ್ಮಾಣವಾದ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ಸ್ವಾತಂತ್ರ ಹೋರಾಟಗಾರ್ತಿ, ಕಿತ್ತೂರಿನ ಹಮ್ಮೆಯ ಸುಪುತ್ರಿ, ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ಪ್ರತಿಮೆ ಅನಾರಣ ಆಗಬೇಕು ಎಂದು ಬೇಡಿಕೆ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವ್ಯಾಪರಸ್ಥರ ಸಂಘ, ಕವಟಗಿ ಮಠ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ರಾಣಿ ಚನ್ನಮ್ಮ ಪ್ರತಿಮೆ ಅನಾವರಣ 16ನೇ ತಾರೀಕಿನಂದು ನಡೆಯಲು ಸಕಲ ಸಿದ್ದತೆ ನಡೆದಿದ್ದು, ಹಾಲಿ ವಿಧಾನ ಪರಿಷತ್ನ ಸದಸ್ಯ ಪ್ರಕಾಶ್ ಹುಕ್ಕೇರಿ ಅವರು ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತ ಪಡಿಸಿ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ, ಇವರ ನಡವಳಿಕೆಯನ್ನು ಇಡೀ ಚಿಕ್ಕೋಡಿ ಜನತೆ, ವ್ಯಾಪರಸ್ಥರ ಸಂಘ ಖಂಡಿಸುತ್ತದೆ’’ ಎಂದು ಮಹಾಂತೇಶ್ ಕವಟಗಿಮಠ ಹೇಳಿದರು.