ಕರ್ನಾಟಕ

karnataka

ETV Bharat / state

ಸಾಧನೆಗೆ ಅಡ್ಡಿಯಾಗಬಾರದೆಂದು ತಂದೆಯ ಸಾವಿನ ಸುದ್ದಿ ತಿಳಿಸದ ಮನೆಯವರು... ಮುಂದೇನಾಯ್ತು?

ಮಗ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗೆದ್ದು, ಪದಕದೊಂದಿಗೆ ಹಸನ್ಮುಖಿಯಾಗಿ ಮನೆಗೆ ಮರಳಿದಾಗಲೇ ಆತನಿಗೆ ತಿಳಿದಿದ್ದು, ತನ್ನ ತಂದೆ ಇನ್ನಿಲ್ಲವೆಂಬ ಸುದ್ದಿ. ಮಗ ತಂದೆಗೆ ಕೊಟ್ಟ ಮಾತಿನಂತೆ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾನೆ. ಆದರೆ ಮಗನ ಸಂತಸದ ಕ್ಷಣಗಳನ್ನು ನೋಡಿ ಆನಂದಿಸಲು ತಂದೆಯೇ ಇರಲಿಲ್ಲ.

By

Published : May 20, 2019, 7:24 AM IST

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗೆದ್ದ ಶ್ರೀವರ್ಧನ

ಚಿಕ್ಕೋಡಿ:ತಂದೆ ಸಾವಿನ ಸುದ್ದಿ ಸಾಧನೆಗೆ ಅಡ್ಡಿ ಆಗಬಾರದೆಂಬ ಕಾರಣಕ್ಕೆ ಕುಟುಂಬದವರು ತಂದೆಯ ಸಾವಿನ ಸುದ್ದಿಯನ್ನು ಮಗನಿಗೆ ತಿಳಿಸಿರಲಿಲ್ಲ. ಮಗ ತಂದೆಗೆ ಕೊಟ್ಟ ಮಾತಿನಂತೆ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾನೆ.

ಈ ಮನಕಲಕುವ ಘಟನೆ ನಡೆದಿರುವುದು ಕಾಪಸಿ ಗ್ರಾಮದಲ್ಲಿ. ಮೂಲತಃ ನಿಪ್ಪಾಣಿ ತಾಲೂಕಿನ ಕೊಗನೋಳಿ ಗ್ರಾಮದ ಸಂಜಯ ಕಾಶೀದ ವ್ಯವಸಾಯಕ್ಕಾಗಿ ಕಾಪಸಿ ಗ್ರಾಮದಲ್ಲಿ ವಾಸವಾಗಿದ್ದರು. ಇವರ ಪುತ್ರ ಶ್ರೀವರ್ಧನ ಕಾಪಸಿಯ ಅನೇಕ ಸ್ಥಳಗಳಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಂಡಿದ್ದಾನೆ. ಈಚೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದ. ಇದೇ ಸಮಯದಲ್ಲಿ ಬಾಲಕನ ತಂದೆ ಸಂಜಯ ಕಾಶೀದ ಕಾಯಿಲೆಯಿಂದ ಬಳಲುತ್ತಿದ್ದುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಶ್ರೀವರ್ಧನ ಮೇ. 5 ರಂದು ನೇಪಾಳಕ್ಕೆ ಸಾಗುತ್ತಿದ್ದಂತೆ ತಂದೆ ಸಂಜಯ ಕಾಶೀದರ ದೇಹಸ್ಥಿತಿ ಮತ್ತಷ್ಟು ಕುಸಿದಿತ್ತು. ಜವರಾಯನ ಅಟ್ಟಹಾಸದಿಂದ ನಿಧನ ಹೊಂದಿದರು. ಆದರೆ, ಈ ಸುದ್ದಿಯನ್ನು ನೇಪಾಳದಲ್ಲಿದ್ದ ಮಗನಿಗೆ ತಿಳಿಸಲಿಲ್ಲ. ಶ್ರೀವರ್ಧನ್‌ಗೆ ತನ್ನ ತಂದೆ ಇಹಲೋಕ ತ್ಯಜಿಸಿದ್ದು ಗೊತ್ತಿರಲಿಲ್ಲ. ಮಗನ ಅನುಪಸ್ಥಿತಿಯಲ್ಲೇ ತಂದೆಯ ಅಂತ್ಯಸಂಸ್ಕಾರವೂ ನಡೆಯಿತು.

ಮೇ 10 ಹಾಗೂ 11ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕಗಳಿಸಿದ ಶ್ರೀವರ್ಧನ ತಂದೆಗೆ ನೀಡಿದ ಭಾಷೆ ಉಳಿಸಿಕೊಂಡು ಗ್ರಾಮಕ್ಕೆ ಮರಳಿದ. ಆ ಸಂತಸದ ಕ್ಷಣಗಳನ್ನು ನೋಡಿ ಆನಂದಿಸಲು ತಂದೆಯೇ ಜೀವಂತವಾಗಿರಲಿಲ್ಲ ಎಂಬುದು ಬೇಸರದ ಸಂಗತಿ.

For All Latest Updates

TAGGED:

ABOUT THE AUTHOR

...view details