ಚಿಕ್ಕೋಡಿ: ತಾಲೂಕಿನ ಕೆ.ಕೆ.ಮಮದಾಪೂರ ಗ್ರಾಮದಲ್ಲಿ ಅನೈತಿಕ ಸಂಬಂಧದ ಆರೋಪದಡಿ ಜೋಡಿ ಕೊಲೆ ಮಾಡಿದ ಮೂವರು ಆರೋಪಿಗಳಿಗೆ 9 ವರ್ಷಗಳ ಬಳಿಕ ಚಿಕ್ಕೋಡಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಕೆ.ಕೆ.ಮಮದಾಪೂರ ಗ್ರಾಮದ ಬಸವರಾಜ ಬುರ್ಜಿ (24) ಹಾಗೂ 21 ವರ್ಷದ ಮಹಿಳೆಯ ಬರ್ಬರ ಹತ್ಯೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಚಿಕ್ಕೋಡಿ ಪೊಲೀಸರು ಬಾಬು ಅಕಳೆ (24) ನಾಗಪ್ಪ ಅಕಳೆ (21) ಹಾಗೂ ಮುತ್ಯಪ್ಪ ಬೀಮಪ್ಪ ಅಕಳೆ (20) ಎಂಬ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಮೂಲಕ ಕೊಲೆ ಆರೋಪ ಸಾಬೀತಾಗಿದ್ದು ಇಂದು ಚಿಕ್ಕೋಡಿಯ ಏಳನೇ ಹೆಚ್ಚುವರಿ ನ್ಯಾಯಾಲಯ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.