ಬೆಳಗಾವಿ:ಇಲ್ಲಿನ ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಿರೇಮಠ, ಪಂಚಪೀಠ, ವಿರಕ್ತಮಠ ಸೇರಿ ಏಕಕಾಲದಲ್ಲಿ 70ಕ್ಕೂ ಅಧಿಕ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.
ಸಿಎಂ ಆಗಮನ ಹಿನ್ನೆಲೆಯಲ್ಲಿ ಮಠದಲ್ಲಿ ಸುದರ್ಶನ ಹೋಮ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೆಳಗಾವಿ ಲೋಕಸಭೆ ವ್ಯಾಪ್ತಿಯ ಎಲ್ಲ ಸ್ವಾಮೀಜಿಗಳನ್ನು ಮಠಕ್ಕೆ ಆಹ್ವಾನಿಸಿದ್ದರು. ಸಿಎಂಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸತ್ಕರಿಸಿ ಆಶೀರ್ವಾದ ನೀಡಿದರು. ಬಳಿಕ ಪ್ರಮುಖ ಸ್ವಾಮೀಜಿಗಳ ಜೊತೆಗೆ ಸಿಎಂ ಗೌಪ್ಯ ಸಭೆ ನಡೆಸಿ ಬಿಜೆಪಿ ಬೆಂಬಲಿಸುವಂತೆ ಕೋರಿದರು.
'ಮಾದರಿ ರಾಜ್ಯ ಮಾಡುತ್ತೇನೆ'
ಸತ್ಕಾರ ಸ್ವೀಕರಿಸಿ ಮಾತನಾಡಿದ ಸಿಎಂ, ರಾಜ್ಯದ ಮಠಾಧೀಶರು ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ರಾಜ್ಯವನ್ನು ಇನ್ನೆರಡು ವರ್ಷಗಳಲ್ಲಿ ಮಾದರಿ ರಾಜ್ಯವಾಗಿ ಪರಿವರ್ತಿಸುತ್ತೇನೆ. ಧರ್ಮಪ್ರಜ್ಞೆ, ಸಮಾಜಪ್ರಜ್ಞೆ, ರಾಷ್ಟ್ರ ಕಟ್ಟುವ ಪ್ರಜ್ಞೆಯನ್ನು ಪೂಜ್ಯರು ಮೂಡಿಸುತ್ತಿದ್ದಾರೆ. ರಾಮ ಮಂದಿರ 2,500 ಕೋಟಿಯಷ್ಟು ಹಣವನ್ನು ಸಾಮಾನ್ಯ ಜನರು ನೀಡಿದ್ದಾರೆ. ರಾಮನ ಮೇಲಿನ ಅಭಿಮಾನ, ಭಕ್ತಿಯನ್ನು ದೇಶದ ಜನರು ತೋರಿದ್ದಾರೆ. ಈಗಾಗಲೇ ಕೆಲವು ಕಡೆ ನೈಟ್ ಕರ್ಫ್ಯೂ ಹಾಕಿದ್ದೇವೆ. ಬರುವ ದಿನಗಳಲ್ಲಿ ಕೊರೊನಾ ದೂರ ಆಗುವಂತೆ ಪೂಜ್ಯರು ಹರಿಸಬೇಕು. ಪೂಜ್ಯರ ಆಶೀರ್ವಾದದಂತೆ ಕರ್ನಾಟಕ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸುವೆ ಎಂದರು.
ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಸಿಎಂ ಯಡಿಯೂರಪ್ಪ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಎಲ್ಲ ಧರ್ಮವನ್ನು ಸಮಾನವಾಗಿ ಗೌರವಿಸಿದವರು ಸಿಎಂ ಯಡಿಯೂರಪ್ಪನವರು ಮಾತ್ರ. ನಮ್ಮ ದೇಶದ ಆತ್ಮವೇ ಆಧ್ಯಾತ್ಮಿಕ. ನಮ್ಮ ದೇಶದಲ್ಲಿ ನೆಲೆಸಿರುವ ಶಾಂತಿ, ನೆಮ್ಮದಿ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ನಮ್ಮ ಪೂಜಾ ಪದ್ಧತಿ, ಆರಾಧನಾ ಪದ್ಧತಿ ಹಾಗೂ ಕುಟುಂಬ ಪದ್ಧತಿ ಬೇರೆ ಬೇರೆ ಆಗಿದೆ. ಪ್ರಪಂಚದ ಬಹಳಷ್ಟು ಜನರು ಮಾನಸಿಕ ನೆಮ್ಮದಿ ಬಯಸಿ ಭಾರತಕ್ಕೆ ಬರುತ್ತಿದ್ದಾರೆ. ಯಡಿಯೂರಪ್ಪನವರು ಆರ್.ಎಸ್.ಎಸ್ ಸಂಸ್ಕೃತಿಯಲ್ಲಿ ಬೆಳೆದು ಬಂದಿದ್ದಾರೆ.
ಯಡಿಯೂರಪ್ಪನವರು ಎಂದಿಗೂ ರಾಜಕಾರಣಕ್ಕಾಗಿ ಮಠಗಳಿಗೆ ಹಣ ನೀಡಲಿಲ್ಲ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಜ್ಜನ, ಸುಸಂಸ್ಕೃತ ಜಿಲ್ಲೆ ಮುಂದುವರೆಯುವುದು ನಿಮ್ಮ ಕೈಯಲ್ಲಿ ಇದೇ. ರಾಜಕಾರಣದಲ್ಲಿ ಸಜ್ಜನಿಕೆ ಇರಬೇಕು, ಸುಸಂಸ್ಕೃತ ಇರಬೇಕು. ಯಾವುದೇ ಗೂಂಡಾ ಸಂಸ್ಕೃತಿಗಳಿಗೆ, ಧಮನಕಾರಿ ಪ್ರವೃತ್ತಿಗರಿಗೆ ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಯಲ್ಲಿ ಯಾವ ರೀತಿ ಆಶೀರ್ವಾದ ಮಾಡಬೇಕು ಎನ್ನುವುದು ಪೂಜ್ಯರಿಗೆ ಗೊತ್ತಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಮುಖ್ಯಮಂತ್ರಿ ಮೇಲೆ ಇರಲಿ ಎಂದು ಕೋರಿದರು.
ಇದನ್ನೂ ಓದಿ:ಒಂದೇ ದಿನ 2 ಲಕ್ಷ ಕೋವಿಡ್ ಕೇಸ್ಗೆ ಸಾಕ್ಷಿಯಾದ ಭಾರತ.. ಮತ್ತೆ ಸಾವಿರಕ್ಕೂ ಹೆಚ್ಚು ಮಂದಿ ಬಲಿ