ಬೆಳಗಾವಿ: ಬ್ರಿಟಿಷರ ವಿರುದ್ಧ ಮೊದಲ ದಿಗ್ವಿಜಯ ಸಾಧಿಸಿದ ಕಿತ್ತೂರು ಸಂಸ್ಥಾನದ ಕುಡಿಗಳಿವರು. ನಾಡಿನ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆದವರು. ರಾಜ ದರ್ಬಾರ್ನಲ್ಲಿ ಮೆರೆಯಬೇಕಾದವರು ಇಂದು ಕಿರಾಣಿ ಅಂಗಡಿ ನಡೆಸಿ, ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಸಾಮಾನ್ಯರಂತೆ ಜೀವಿಸುತ್ತಿದ್ದಾರೆ. ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಇವರು, ನಮಗೆ ವಿಶೇಷ ಅನುದಾನ ಕೊಡಿ, ಇಲ್ಲವೇ ನಮ್ಮ ಕೋಟೆಯನ್ನು ನಮಗೆ ಬಿಟ್ಟು ಕೊಡಿ ಎಂದು ಆಗ್ರಹಿಸುತ್ತಿದ್ದಾರೆ.
ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಸೋಲುಣಿಸಿದ ಕೆಚ್ಚೆದೆಯ ರಾಣಿ ಕಿತ್ತೂರು ಚೆನ್ನಮ್ಮನ ಸಂಸ್ಥಾನದ ವಂಶಜರ ವ್ಯಥೆಯ ಕಥೆ ಈಟಿವಿ ಭಾರತದ ವಿಶೇಷ ವರದಿಯಾಗಿದೆ. ಮಲ್ಲಸರ್ಜ ದೇಸಾಯಿ ಅವರ ಪುತ್ರ ಶಿವಲಿಂಗ ರುದ್ರಸರ್ಜರ ದತ್ತು ಪುತ್ರ ರಾಜಾ ಶಿವಲಿಂಗಪ್ಪ ಅವರ ಸಂತತಿಯ ಏಳನೇ ತಲೆಮಾರಿನ ಬಾಳಾಸಾಹೇಬ ಶಂಕರ ದೇಸಾಯಿ, ಸೋಮಶೇಖರ ವಿಶ್ವನಾಥ ದೇಸಾಯಿ, ಅಶೋಕ ಚಂದ್ರಶೇಖರ ದೇಸಾಯಿ ಮತ್ತು ಅವರ ಮಕ್ಕಳು ಬೆಳಗಾವಿ, ಖಾನಾಪುರ, ತೋಲಗಿ, ಕಿತ್ತೂರು, ಪಕ್ಕದ ಮಹಾರಾಷ್ಟ್ರದ ಗಡಿಂಗ್ಲಜ ಸೇರಿ ಮತ್ತಿತರ ಕಡೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಚೆನ್ನಮ್ಮನ ಹೆಸರಿನ ಜನರಲ್ ಸ್ಟೋರ್ಸ್ ನಡೆಸುತ್ತಿರುವ ಚೆನ್ನಮ್ಮಾಜಿ ವಂಶಜ ಅಶೋಕ ದೇಸಾಯಿ ಅವರ ಪುತ್ರ ಚಂದ್ರಶೇಖರ ದೇಸಾಯಿ ಮತ್ತು ಸೋಮಶೇಖರ ದೇಸಾಯಿ ಜೊತೆಗೆ ಈಟಿವಿ ಭಾರತಮಾತಿಗಿಳಿದಾಗ, ಕಿತ್ತೂರು ಸಂಸ್ಥಾನದ ಕರುಳಬಳ್ಳಿಗಳು ಈ ರೀತಿ ಸಾಮಾನ್ಯ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿತು. ಅರಮನೆಯಲ್ಲಿರಬೇಕಾದವರು ಈ ರೀತಿ ಕಷ್ಟ ಪಡುತ್ತಿರುವುದು ಕಂಡು ಅಚ್ಚರಿ ಎನಿಸಿತು.
ಮೂರು ದಿನ ನಡೆಯುವ ಚೆನ್ನಮ್ಮನ ಕಿತ್ತೂರು ಉತ್ಸವಕ್ಕೆ ಪ್ರತಿ ವರ್ಷವೂ ಬೆಳಗಾವಿ ಜಿಲ್ಲಾಡಳಿತ ಕಾಟಾಚಾರಕ್ಕೆ ಎಂಬಂತೆ ಆಹ್ವಾನಿಸುತ್ತಿದೆ ಎಂದು ಬೇಸರ ಹೊರಹಾಕಿದ ಚಂದ್ರಶೇಖರ ಅವರು, "ಶಿಕ್ಷಣ ಇಲಾಖೆ ಅಧಿಕಾರಿಗಳು ಫೋನ್ ಮಾಡಿ ನಿಮ್ಮ ಸತ್ಕಾರವಿದೆ ಉತ್ಸವಕ್ಕೆ ಬನ್ನಿ ಎನ್ನುತ್ತಾರೆ. ಚೆನ್ನಮ್ಮನ ವಂಶಜರು ಅಂತಾ ತುಂಬಾ ಹೆಮ್ಮೆಯಿದೆ. ಆದರೆ ಸರ್ಕಾರದಿಂದ ಯಾವುದೇ ರೀತಿ ಗೌರವ ಮತ್ತು ಅನುದಾನ ಸಿಗುತ್ತಿಲ್ಲ. ನಮಗೆ ವಿಶೇಷ ಪರಿಹಾರ ನೀಡಬೇಕು. ಇಲ್ಲವಾದರೆ ನಮ್ಮ ಕೋಟೆ ನಮಗೆ ಬಿಟ್ಟು ಕೊಡಬೇಕು. ಈ ಸಂಬಂಧ ಕಾನೂನು ಸಮರಕ್ಕೂ ನಾವು ಸಿದ್ಧ" ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ:ಅಕ್ಕನ ಮಗನಿಗೆ ಪಟ್ಟ ಕಟ್ಟಿ, ಸ್ವಂತ ಮಗನಿಗೆ ಭೈರವಿ ಕಂಕಣ ತೊಡಿಸಿದ ಮಹಾತ್ಯಾಗಿ ಕಿತ್ತೂರು ರಾಣಿ ಚೆನ್ನಮ್ಮ!