ಕರ್ನಾಟಕ

karnataka

ETV Bharat / state

ಮಗನನ್ನು ಶಾಲೆಗೆ ದಾಖಲಿಸುವ ಸೋಗಲ್ಲಿ ಶಾಲೆ ಅಕೌಂಟ್‌ನಿಂದ 90 ಸಾವಿರ ದೋಚಿದ ಸೈಬರ್‌ ವಂಚಕರು! - ಬೆಳಗಾವಿ

ಸಿಂದೋಳಿ ನಗರದ ಪಬ್ಲಿಕ್ ಶಾಲೆಯ ಶಾಲಾ ಅಕೌಂಟ್​​ಗೆ ಕನ್ನ ಹಾಕಿರುವ ಖದೀಮರು 90 ಸಾವಿರ ರೂ.ಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಕುರಿತು ಬೆಳಗಾವಿ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ.

Belgavi
ಡಿಸಿಪಿ ಡಾ.ವಿಕ್ರಮ ಆಮಟೆ

By

Published : Jul 11, 2021, 9:15 PM IST

ಬೆಳಗಾವಿ: ಮಗನನ್ನು ಶಾಲೆಗೆ ದಾಖಲಿಸುವುದಾಗಿ ಹೇಳಿ ನಕಲಿ ಸೇನಾ ಅಧಿಕಾರಿ ಸೋಗಿನಲ್ಲಿ ಸೈಬರ್ ವಂಚಕರು ನಗರದ ಖಾಸಗಿ ಶಾಲಾ ಅಕೌಂಟ್​​ನಿಂದ 90 ಸಾವಿರ ಹಣ ಪಡೆದಿರುವ ಕುರಿತು ಬೆಳಗಾವಿ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ.

ಡಿಸಿಪಿ ಡಾ.ವಿಕ್ರಮ ಆಮಟೆ

ಸಿಂದೋಳಿ ನಗರದ ಪಬ್ಲಿಕ್ ಶಾಲೆಯ ಶಾಲಾ ಅಕೌಂಟ್​​ಗೆ ಕನ್ನ ಹಾಕಿರುವ ಖದೀಮರು 90 ಸಾವಿರ ರೂ.ಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ಕಳೆದುಕೊಂಡಿರುವ ಖಾಸಗಿ ಶಾಲೆಯವರು ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೇನಾ ಅಧಿಕಾರಿಗಳ ಸೋಗಿನಲ್ಲಿ ಫೋನ್ ಕರೆ:

ಸೇನಾ ಅಧಿಕಾರಿಯ ಹೆಸರಿನಲ್ಲಿ ನಗರದ ಖಾಸಗಿ ಶಾಲೆಗೆ ಕರೆ ಮಾಡಿದ ಸೈಬರ್ ವಂಚಕ ಕಾಶ್ಮೀರ ಸೈನ್ಯದಲ್ಲಿ ಸೇನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದು, ಹೆಂಡತಿ ಹಾಗೂ ಮಕ್ಕಳು ಬೆಳಗಾವಿಯಲ್ಲಿ ವಾಸವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಇದಾದ ಬಳಿಕ ವಾಟ್ಸ್‌ಆ್ಯಪ್​​ ಮುಖಾಂತರವೇ ಸೈನ್ಯದಲ್ಲಿರುವ ಹಲವು ನಕಲಿ ಫೋಟೋ, ಮಗುವಿನ ಭಾವಚಿತ್ರ, ಹೆಂಡತಿಯ ಫೋಟೊ ಹಾಗೂ ಹೆಸರು ವಿಳಾಸ ಕಳುಹಿಸಿ ಎಲ್‌ಕೆಜಿ ಅಡ್ಮಿಷನ್ ಬೇಕಾಗಿದೆ ಎಂದಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದೆ ಆತನ ಶಾಲೆಯ ಅಡ್ಮಿಷನ್ ಶುಲ್ಕವನ್ನು ಆನ್‌ಲೈನ್ ಮುಖಾಂತರವೇ ಮಿಲಿಟರಿ ಖಾತೆಯಿಂದ ವರ್ಗಾಯಿಸುವುದಾಗಿ ಹೇಳಿ ನಂಬಿಸಿ ಶಾಲಾ ಆಡಳಿತ ಮಂಡಳಿಯಿಂದ ಶಾಲೆಯ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾನೆ. ಬಳಿಕ ಶಾಲಾ ಅಕೌಂಟ್​​ 1 ರೂ ಕಳುಹಿಸಿ ಅದನ್ನು ದೃಢಪಡಿಸಲು ಹೇಳುತ್ತಾನೆ. ಬಳಿಕ ಶಾಲೆಯಯವರು ದೃಢಪಡಿಸುತ್ತಿದ್ದಂತೆ ಶಾಲೆಯ ಖಾತೆಯಲ್ಲಿನ 90 ಸಾವಿರ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಡಾ.ವಿಕ್ರಮ ಆಮಟೆ, ಯಾರಾದರೂ ಅಪರಿಚಿತರು ಶಾಲೆಗೆ ಅಡ್ಮಿಷನ್ ಮಾಡುವುದಾಗಿ ಹೇಳಿದರೆ ಅವರಿಗೆ ಶಾಲೆಯ ಮಾಹಿತಿ ಮಾತ್ರ ಹಂಚಿಕೊಳ್ಳಬೇಕು. ಬ್ಯಾಂಕ್ ಸೇರಿದಂತೆ ಇತರ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಇಂತಹ ಘಟನೆಗಳು ಆದಲ್ಲಿ ತಕ್ಷಣವೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಬೇಕು. ಮುಂದೆಯೂ ಇಂತಹ ಘಟನೆಗಳು ನಡೆಯಬಹುದು. ಹೀಗಾಗಿ ಬೆಳಗಾವಿ ನಗರದ ವಿವಿಧ ಶಾಲಾ ಆಡಳಿತ ಮಂಡಳಿಗಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details