ಬೆಳಗಾವಿ : ರಸ್ತೆ ಪಕ್ಕ ಪ್ರತಿಷ್ಠಾಪಿಸಿದ್ದ ವೀರರಾಣಿ ಚನ್ನಮ್ಮಾಜಿ ಮೂರ್ತಿಯನ್ನು ತೆರವುಗೊಳಿಸಿ, ಹೋರಾಟಗಾರರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಧಾಮಣೆ ಗ್ರಾ.ಪಂ ವ್ಯಾಪ್ತಿಯ ಕುರುಬರಹಟ್ಟಿ ಗ್ರಾಮದಲ್ಲಿ ಇಂದು ನಡೆದಿದೆ.
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ವೀರರಾಣಿ ಚನ್ನಮ್ಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಗ್ರಾಮಸ್ಥರು ಮುಂದಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಆಗಮಿಸಿದ ಪೊಲೀಸರು, ಸಮಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಯಾವುದೇ ಕಾರಣಕ್ಕೂ ಮೂರ್ತಿ ಸೇರಿದಂತೆ ಇನ್ನಿತರ ಯಾವುದೇ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ಇಲ್ಲ. ಆದ್ದರಿಂದ, ಅನುಮತಿ ಇಲ್ಲದೆ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಲ್ಲ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಪೊಲೀಸರು ತಿಳಿಹೇಳಿ ಮನವೊಲಿಸಲು ಹರಸಾಹಸಪಟ್ಟಿದ್ದಾರೆ. ಬಳಿಕ ಮಾತಿನ ಚಕಮಕಿ ಅತಿರೇಕಕ್ಕೆ ಹೋಗಿದ್ದು ಅಂತಿಮವಾಗಿ ಪೊಲೀಸರು ಪ್ರತಿಷ್ಠಾಪನೆಗೆಂದು ತರಲಾಗಿದ್ದ ಚನ್ನಮ್ಮಳ ಪುತ್ಥಳಿಯನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಂತೆ, ಗ್ರಾಮಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.