ಚಾಂಗದೇವ ನಗರ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಬೆಳಗಾವಿ :ಮನೆಗಳನ್ನು ಪರಿಶೀಲನೆ ನಡೆಸಿ, ಕಾನೂನಾತ್ಮಕವಾಗಿ ಅಧಿಕೃತಗೊಳಿಸುವಂತೆ ಆಗ್ರಹಿಸಿ ಚಾಂಗದೇವ ನಗರ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿತು. ಬಳಿಕ ಸಂಘದ ಸದಸ್ಯರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬೆಳಗಾವಿ ಕಣಬರಗಿ ಬಳಿಯ ಸೈನಿಕ ಕಾಲೋನಿ, ಚಾಂಗದೇವ ಕಾಲೋನಿ, ಕಣಬರಗಿ ರೋಡ್, ಮಹಾವೀರ ಕಾಲೋನಿ ಪ್ರದೇಶದಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಕಳೆದ 15-20 ವರ್ಷಗಳ ಹಿಂದೆ ನೇರವಾಗಿ ರೈತರಿಂದ ಜಾಗ ಖರೀದಿಸಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಪಾಲಿಕೆ ವತಿಯಿಂದ ರಸ್ತೆ , ಚರಂಡಿ, ವಿದ್ಯುತ್ ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪಾಲಿಕೆಗೆ ತೆರಿಗೆಯನ್ನೂ ತುಂಬುತ್ತಿದ್ದೇವೆ. ಹೀಗಿರುವಾಗ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ 61ನೇ ಯೋಜನೆ ಅಡಿಯಲ್ಲಿ ಅಲ್ಲಿನ ರೈತರು ಹಾಗೂ ನಿವಾಸಿಗಳ ಸಮ್ಮತಿ ಇಲ್ಲದೇ ಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಇದರಿಂದ ಅಲ್ಲಿನ ರಹವಾಸಿಗಳಿಗೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ಆ ವಸತಿ ನಿವೇಶನಗಳನ್ನು ಕಾನೂನಾತ್ಮಕವಾಗಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೈತ ಮುಖಂಡ ಪ್ರಕಾಶ್ ನಾಯಿಕ್ ಮಾತನಾಡಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಉಚ್ಛ ನ್ಯಾಯಾಲಯಕ್ಕೆ ಅಲ್ಲಿ ಯಾವುದೇ ವಸತಿ ಇಲ್ಲ ಎಂದು ಮಾಹಿತಿ ನೀಡಿದೆ. ನಗರಾಭಿವೃದ್ಧಿ ಪ್ರಾಧಿಕಾರ ಸರಿಯಾದ ಮಾಹಿತಿ ನೀಡಿಲ್ಲ. ತಮಗೆ ಬೇಕಾದವರಿಗೆ NOC ಕೊಡುತ್ತಿದೆ. ಹಾಗಾಗಿ, ಅಲ್ಲಿ ವಾಸವಿರುವ ಜನರ ಮನೆಗಳನ್ನು ಕಾನೂನಾತ್ಮಕವಾಗಿ ಅಧಿಕೃತಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಬುಡಾದವರು ಈಗಾಲೇ ಸರ್ವೇ ಮಾಡಿದ್ದು, ಅಲ್ಲಿ 92 ಮನೆಗಳಿವೆ. ಆದರೆ ಪ್ರತಿಭಟನಾಕಾರರು 200 ಮನೆಗಳಿವೆ ಎಂದು ಮನವಿ ಕೊಟ್ಟಿದ್ದಾರೆ. ಹಾಗಾಗಿ, ಒಂದು ವಾರದೊಳಗೆ ಜಂಟಿ ಸಮೀಕ್ಷೆ ಮಾಡುತ್ತೇವೆ. ಅಲ್ಲಿ ಎಷ್ಟು ಮನೆಗಳಿವೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಅದೇ ರೀತಿ ಬುಡಾದಿಂದ ಹೊಸದಾಗಿ ಟೆಂಡರ್ ಕೂಡ ಕರೆಯಲಾಗಿದ್ದು, 129 ಎಕರೆ ಪ್ರದೇಶದಲ್ಲಿ ಬಹು ನಿರೀಕ್ಷಿತ ಯೋಜನೆ ಇದಾಗಿದೆ. ಇದರಲ್ಲಿ ಏಳೆಂಟು ಎಕರೆಯಲ್ಲಿ ಈ ರೀತಿ ಸಮಸ್ಯೆ ಆಗಿದೆ. ಹಾಗಾಗಿ, ಯಾರಿಗೂ ಅನ್ಯಾಯ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಬಾಂಡ್ ಪೇಪರ್ ಮೇಲೆ ಜಾಗ ಖರೀದಿ ಮಾಡುವುದು ಕಾನೂನು ಬಾಹಿರ. ಆದ್ದರಿಂದ ಯಾರೂ ಈ ರೀತಿ ಮಾಡಬಾರದು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸಿ: ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪಿಸುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟವು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಮನವಿ ಸಲ್ಲಿಸಿತು.
ಬೆಳಗಾವಿಯ ಹಳೆ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಇಲ್ಲದ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿನೆ ಸ್ಥಾಪನೆ ಮಾಡಿರುವುದು ಖಂಡನೀಯ. ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವ ಮೂಲಕ ಗೌರವ ಸಲ್ಲಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ್ ಎಚ್ಚರಿಸಿದರು. ಈ ವೇಳೆ ಹೋರಾಟಗಾರರಾದ ಕಸ್ತೂರಿ ಭಾವಿ, ಸವಿತಾ ಸಾತ್ಪುತೆ, ಹನುಮಂತ ಬುಚಡಿ, ವಾಜೀದ ಹಿರೇಕೊಡಿ, ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ :ಲೋಕಸಭೆ ಚುನಾವಣೆಗೆ ಜೆಡಿಎಸ್ ತಯಾರಿ : ದೊಡ್ಡ ಆಲಹಳ್ಳಿಯಲ್ಲಿ ಬೆಳೆದ ಅಕ್ಕಿನಾ? : ಹೆಚ್ಡಿಕೆ