ಬೆಳಗಾವಿ : ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-3 ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯುತ್ತಿದಂತೆ ಬೆಳಗಾವಿ ಹಾಗು ಮೈಸೂರಿನಲ್ಲಿ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬೆಳಗಾವಿ ಶಿವಬಸವ ನಗರದ ಡಾ. ಶಿವಬಸವ ಸ್ವಾಮೀಜಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಪಾಲ್ಗೊಂಡಿದ್ದರು. ಭಾರತ ಮಾತಾಕಿ ಜೈ ಮತ್ತು ಇಸ್ರೋ ವಿಜ್ಞಾನಿಗಳಿಗೆ ಜಯವಾಗಲಿ ಎಂಬ ಘೋಷಣೆಗಳು ಕೇಳಿಬಂದವು. ಸಾರ್ವಜನಿಕರಿಗೆ ಸಿಹಿ ಹಂಚಿ ಸ್ವಾಮೀಜಿ ಸಂಭ್ರಮಿಸಿದರು.
ಈಟಿವಿ ಭಾರತ ಜೊತೆಗೆ ಮಾತನಾಡಿ ಹರ್ಷ ವ್ಯಕ್ತಪಡಿಸಿದ ಡಾ. ಅಲ್ಲಮಪ್ರಭು ಸ್ವಾಮೀಜಿ, ಭಾರತ ದೇಶವನ್ನು ವಿಶ್ವಗುರುವನ್ನಾಗಿ ಮಾಡಿದ ಶ್ರೇಯಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ. ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಚಂದ್ರನ ಅಂಗಳದಲ್ಲಿ ಅದರಲ್ಲೂ ದಕ್ಷಿಣ ಧ್ರುವದಲ್ಲಿ ಯಾವುದೇ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿದೆ ಎಂದರು.
ಡಾ. ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಮಾತನಾಡಿ, ಜಗತ್ತಿನ 195 ರಾಷ್ಟ್ರಗಳು ಮಾಡದ ಸಾಧನೆಯನ್ನು ನಮ್ಮ ಭಾರತ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆ ಮಾಡಿ ವಿಶ್ವದಾಖಲೆ ನಿರ್ಮಿಸಿದೆ. ಅವರಿಗೆ ಎಲ್ಲ ಭಾರತೀಯರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಭಾರತಕ್ಕೆ ಇಷ್ಟು ದೊಡ್ಡ ಜಯ ತಂದು ಕೊಟ್ಟಿರುವ ಇಸ್ರೋ ವಿಜ್ಞಾನಿಗಳು ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಈ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂಥದ್ದು. ಭಾರತ ವಿಶ್ವಗುರು ಎಂದು ನಮ್ಮ ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಚಂದ್ರನ ಮೇಲೆ ವಿಕ್ರಮ ಲ್ಯಾಂಡಿಂಗ್ ವೀಕ್ಷಣೆಗೆ ಬೆಳಗಾವಿ ನಗರದ ಡಾ.ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಮಕ್ಕಳು ಹಾಗೂ ಖಗೋಳ ಆಸಕ್ತರಿಗೆ ಎಲ್ಇಡಿ ಸ್ಕ್ರೀನ್ ಮೂಲಕ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಮಕ್ಕಳು ಭಾಗವಹಿಸಿದ್ದರು. ಲ್ಯಾಂಡರ್ ಚಂದ್ರನಲ್ಲಿ ಕಾಲಿಡುತ್ತಿದ್ದಂತೆ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಚಂದ್ರಯಾನ-3ರ ತಂಡದಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ವಿಜ್ಞಾನಿಗಳಾದ ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ನಾರಾಯಣ ಪಡಣೇಕರ್ ಮತ್ತು ಗೋಕಾಕ ತಾಲೂಕಿನ ಮಮದಾಪುರದ ಶಿವಾನಂದ ಮಲ್ಲಪ್ಪ ಕಮತ ಕಾರ್ಯ ನಿರ್ವಹಿಸಿದ್ದಾರೆ. ಬೆಳಗಾವಿಯ ಸರ್ವೇ ಕಂಟ್ರೋಲ್ಸ್ ಏರೋಸ್ಪೇಸ್ ಇಂಡಿಯಾ ಲಿಮಿಟೆಡ್ ಕಂಪನಿ ಸಿದ್ಧಪಡಿಸಿದ ಬಿಡಿಭಾಗಗಳು ಚಂದ್ರಯಾನ-3ರಲ್ಲಿ ಪ್ರಮುಖ ಮಾತ್ರ ವಹಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಚಂದ್ರಯಾನ-3 ಯಶಸ್ವಿ, ಜನರ ಸಂಭ್ರಮ ಮೈಸೂರಿನ ಹಲವೆಡೆ ಸಂಭ್ರಮಾಚರಣೆ : ಮೈಸೂರಿನ ವಿವಿಧೆಡೆ ಸಂಭ್ರಮಾಚರಣೆ ಮಾಡಲಾಯಿತು. ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣ ಧಾಮದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತುಪ್ಪದ ದೀಪ ಬೆಳಗಿಸಿದರು. ಬಿಜೆಪಿ ಕಚೇರಿಯಲ್ಲಿ ಸಿಹಿ ವಿತರಿಸಿ ವಿಜ್ಞಾನಿಗಳಿಗೆ ಜೈಕಾರ ಘೋಷಣೆ ಕೂಗುತ್ತಾ ಸಂಭ್ರಮಿಸಲಾಯಿತು.
ಮೇಯರ್ ಶಿವಕುಮಾರ್ ಮಾತನಾಡಿ, ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿದಿರುವುದರಿಂದ ದೇಶಕ್ಕೆ ಅವಿಸ್ಮರಣೀಯ ದಿನವಾಗಿದೆ. ಭಾರತ ವಿಶ್ವಗುರು ಆಗಲಿದೆ. ಇದೊಂದು ಮೈಲಿಗಲ್ಲು. ವಿಜ್ಞಾನಿಗಳು ವಿಶ್ವ ಬೆರಗಾಗುವಂಥ ಕೆಲಸ ಮಾಡಿದ್ದಾರೆ ಎಂದರು. ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಚಂದ್ರನ ದಕ್ಷಿಣ ಭಾಗದಲ್ಲಿ ಯಾವ ದೇಶದವರೂ ನೌಕೆಯನ್ನು ಲ್ಯಾಂಡ್ ಮಾಡಲು ಆಗಿಲ್ಲ. ಆದರೆ, ಭಾರತದ ವಿಜ್ಞಾನಿಗಳು ಮಾಡಿದ್ದಾರೆ. ಈ ದಿನ ಇಡೀ ದೇಶವೇ ಹೆಮ್ಮೆ ಪಡುವಂಥದ್ದು ಎಂದು ಹೇಳಿದರು.
ಇದನ್ನೂ ಓದಿ :Chandrayaan-3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ: ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ, ಹೆಚ್ಡಿಡಿ.. ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ