ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ನ ಎಂಡಿ ಹೇಳಿಕೆ ಬೆಳಗಾವಿ: ಚಂದ್ರಯಾನ 3 ಯಶಸ್ಸಿನಲ್ಲಿ ಬೆಳಗಾವಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆಂಡ್ ಟೆಕ್ನಾಲಜಿ ಕಂಪನಿಯು ವಿಕ್ರಮ್ ಲ್ಯಾಂಡರ್ಗೆ ಬಿಡಿಭಾಗಗಳನ್ನು ಪೂರೈಕೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಚಂದ್ರಲೋಕಕ್ಕೂ ಹರಡುವಂತೆ ಮಾಡಿದೆ.
ಇಡೀ ವಿಶ್ವವೇ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ಮೈಲಿಗಲ್ಲು ನಿರ್ಮಿಸಿದೆ. ಇನ್ನು ಚಂದ್ರಯಾನ 3 ಕ್ಕೆ ಕೆಲವು ಬಿಡಿ ಭಾಗಗಳನ್ನು ಪೂರೈಕೆ ಮಾಡಿದ್ದು ಬೆಳಗಾವಿಯ ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆ್ಯಂಡ್ ಟೆಕ್ನಾಲಜಿ ಕಂಪನಿ. ಇದು ಕುಂದಾನಗರಿ ಜನ ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದೆ.
ಇನ್ನು, ಈ ಕಂಪನಿಯ ಎಂಡಿ ದೀಪಕ್ ಧಡೋತಿ ಈಟಿವಿ ಭಾರತ ಜೊತೆಗೆ ಮಾತನಾಡಿ, "ಚಂದ್ರಯಾನ-3 ಯಶಸ್ಸು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆಯುವ ದಿನ. ಬಹಳ ಖುಷಿಯಾಗುತ್ತಿದೆ. ರಾಕೆಟ್ಗೆ ಕ್ರಯೋಜನಿಕ್, ವಿಕ್ರಮ್ ಲ್ಯಾಂಡರ್ಗೆ ಕ್ರಿಟಿಕಲ್ ಹೈಡ್ರೋಲಿಕ್ ಹೆಸರಿನ ಸೆನ್ಸಾರ್ ನೀಡಿದ್ದೆವು. ನಾವು ಕಳುಹಿಸಿರುವ ಸೆನ್ಸಾರ್ಗಳು ಸೋಲಾರ್ ಪ್ಯಾನಲ್ ಓಪನ್ ಆಗಲು ಬಳಕೆ ಆಗುತ್ತವೆ. ಸದ್ಯ ವಿಕ್ರಮ್ ಲ್ಯಾಂಡರ್ ಚಲನವಲನ ಎಲ್ಲವೂ ಸೆನ್ಸಾರ್ ಮೇಲೆ ನಡೆಯುತ್ತಿದೆ. ಇಸ್ರೋ ಜೊತೆಗೆ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಚಂದ್ರಯಾನ-2 ರಲ್ಲೂ ಕೂಡ ಬಿಡಿಭಾಗಗಳನ್ನ ಪೂರೈಸಿದ್ದೆವು. ಮುಂದೆ ಗಗನಯಾನಕ್ಕೂ ನಮ್ಮಲ್ಲಿ ಬಿಡಿ ಭಾಗಗಳು ತಯಾರು ಆಗುತ್ತಿವೆ" ಎಂದು ಮಾಹಿತಿ ಹಂಚಿಕೊಂಡರು.
ಭರತೇಶ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಯಾಟ್ಲೈಟ್ ಲ್ಯಾಬ್:ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ಅಧ್ಯಯನ ಮಾಡಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ಬೆಳಗಾವಿ ತಾಲೂಕಿನ ಶಿಂಧೊಳ್ಳಿಯ ಭರತೇಶ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅತ್ಯಾಧುನಿಕ ಸ್ಯಾಟ್ಲೈಟ್ ಲ್ಯಾಬ್ಅನ್ನು ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆ್ಯಂಡ್ ಟೆಕ್ನಾಲಜಿ ಕಂಪನಿ ನಿರ್ಮಿಸಿದೆ. ಇಲ್ಲಿ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬ ಮಾದರಿಯನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಬಗ್ಗೆ ದೀಪಕ ಧಡೋತಿ ವಿವರಿಸಿದ್ದು ಹೀಗೆ.
ಮುಂದುವರಿದು ಮಾತನಾಡಿದ ದೀಪಕ ಧಡೋತಿ, "ಡಾ.ಅಬ್ದುಲ್ ಕಲಾಂ ಅವರ ಸ್ಫೂರ್ತಿಯಿಂದ ಅಮೆರಿಕದಲ್ಲಿದ್ದ ಕೆಲಸ ಬಿಟ್ಟು ತಾಯ್ನಾಡಿಗೆ ಬಂದು ಈ ಉದ್ದಿಮೆ ಆರಂಭಿಸಿದೆ. ಅಲ್ಲದೇ ಕಲಾಂ ಅವರ ಜೊತೆ ಕೆಲಸ ಮಾಡುವ ಅವಕಾಶ ಕೂಡ ನನಗೆ ಸಿಕ್ಕಿತ್ತು. 2007ರಲ್ಲಿ ಹೈದರಾಬಾದ್ನ ಹೈ ಸ್ಪೀಡ್ ಟ್ರಾನ್ಸಟಮೊಸ್ಫೇಟಿಕ್ ಏರ್ ಆ್ಯಂಡ್ ಟ್ರಾನ್ಸಪೋರ್ಟೇಶನ್ ಸಿಂಪೋಜಿವ್ ಮಾಡಿದ್ದರು. ಈಗ ಅದು 16 ವರ್ಷಗಳ ಬಳಿಕ ಸಾಕಾರಗೊಂಡಿದೆ ಎಂದ ಅವರು, ಇಂದಿನ ಯುವ ಉದ್ಯಮಿಗಳು ಡೋಮೇನ್ ನಾಲೆಡ್ಜ್ ಪಡೆದುಕೊಳ್ಳಬೇಕು. ಕೌಶಲ್ಯ ವೃದ್ಧಿಸಿಕೊಳ್ಳಬೇಕು. ಅದೇ ರೀತಿ ಲ್ಯಾಂಡರ್ ಲ್ಯಾಂಡ್ ಆಗುವ ಹಂತದಲ್ಲಿ ಇರುವ ಗಣಿತದ ಸಮೀಕರಣಗಳನ್ನು ತಿಳಿದುಕೊಳ್ಳಬೇಕು" ಎಂದು ಕಿವಿಮಾತು ಹೇಳಿದರು.
ಕೆಎಲ್ಎಸ್ ಜಿಐಟಿ ಕಾಲೇಜಿನ ಏರೋನಾಟಿಕಲ್ ವಿಭಾಗದ ವಿದ್ಯಾರ್ಥಿನಿ ಸೋನಾಲಿ ಮಿಸಾರಿ ಮಾತನಾಡಿ, ಚಂದ್ರಯಾನ-3 ರಲ್ಲಿ ಬಿಡಿಭಾಗಗಳನ್ನು ಪೂರೈಕೆ ಮಾಡಿರುವ ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆ್ಯಂಡ್ ಟೆಕ್ನಾಲಜಿ ಕಂಪನಿಯಲ್ಲಿ ಇಂಟರನ್ ಶಿಪ್ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಯೋಜನೆಗಳಲ್ಲಿ ಕೆಲಸ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದರು.
ಇದನ್ನೂ ಓದಿ:'ಭಲೇ ಭಾರತ': ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಇಸ್ರೋಗೆ ವಿಶ್ವದ ಮೆಚ್ಚುಗೆ