ಕರ್ನಾಟಕ

karnataka

ETV Bharat / state

ಮಳೆ ಹಾನಿ ವೀಕ್ಷಣೆಗೆ ಕೇಂದ್ರ ಅಧ್ಯಯನ ತಂಡ.. ಎನ್​​​ಡಿಆರ್​ಎಫ್ ಮಾರ್ಗಸೂಚಿಯನ್ವಯ 79 ಕೋಟಿ  ನಷ್ಟ - ಈಟಿವಿ ಭಾರತ ಕನ್ನಡ ನ್ಯೂಸ್

ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಉಂಟಾದ ಹಾನಿಯನ್ನು ಕೇಂದ್ರದ ನೆರೆ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲೆಯ ವಿವಿದೆಡೆ ಭೇಟಿ ನೀಡಿದ ತಂಡಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದರು.

central-team-visited-the-rain-damage-areas-in-belagavi
ಮಳೆ ಹಾನಿ ವೀಕ್ಷಣೆಗೆ ಕೇಂದ್ರ ನೆರೆ ಅಧ್ಯಯನ ತಂಡ..ಎನ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ 79.37 ಕೋಟಿ ರೂ. ನಷ್ಟ

By

Published : Sep 10, 2022, 3:26 PM IST

ಬೆಳಗಾವಿ: ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ಕೇಂದ್ರ ನೆರೆ ಅಧ್ಯಯನ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೇಂದ್ರ ಜಲ ಆಯೋಗದ ಜಲಶಕ್ತಿ ಸಚಿವಾಲಯದ ನಿರ್ದೇಶಕ ಅಶೋಕ ಕುಮಾರ್ ವಿ. ಅವರ ನೇತೃತ್ವದ ಕೇಂದ್ರ ಅಧ್ಯಯನ ತಂಡದಲ್ಲಿ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ವಿ.ವಿ.ಶಾಸ್ತ್ರಿ ಹಾಗೂ ಕರ್ನಾಟಕ ‌ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಜತೆಗಿದ್ದರು.

ಬೆಳಗಾವಿ ತಾಲೂಕಿನಿಂದ ಪ್ರವಾಸ ಆರಂಭಿಸಿದ ಕೇಂದ್ರ ತಂಡವು ಮೊದಲಿಗೆ ಯಳ್ಳೂರ ರಸ್ತೆಯಲ್ಲಿ ಭತ್ತದ ಬೆಳೆಹಾನಿಯನ್ನು ವೀಕ್ಷಿಸಿತು. ಇದಾದ ಬಳಿಕ ಖಾನಾಪುರ ತಾಲೂಕಿನ ಶಿಂಗಿನಕೊಪ್ಪ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ‌ ಹಾನಿ ಪರಿಶೀಲಿಸಿ, ಮಾಹಿತಿಯನ್ನು ಪಡೆದುಕೊಂಡರು.

ಗರ್ಲಗುಂಜಿ ಶಾಲಾ ಭೇಟಿ: ಗರ್ಲಗುಂಜಿಯ ಆದರ್ಶ ಬಾಲಕರ ಮರಾಠಿ ವಿದ್ಯಾಲಯದ 11 ರಲ್ಲಿ ಏಳು ಕೊಠಡಿಗಳು ಮಳೆಯಿಂದ ಹಾನಿಗೊಳಗಾಗಿವೆ. 1 ರಿಂದ 7 ನೇ ತರಗತಿಯಲ್ಲಿ ಒಟ್ಟು 150 ಮಕ್ಕಳು ಕಲಿಯುತ್ತಿದ್ದು, ಕೊಠಡಿಗಳು ಹಾನಿಗೊಳಗಾಗಿರುವುದರಿಂದ ಸಮುದಾಯ ಭವನ ಹಾಗೂ ಇರುವ ಕೊಠಡಿಗಳಲ್ಲಿ ತರಗತಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು. 65 ವರ್ಷದ ಶಾಲಾ ಕಟ್ಟಡವನ್ನು ಪರಿಶೀಲಿಸಿದರು. ಅಲ್ಲದೆ ಜುಲೈ ತಿಂಗಳಲ್ಲಿ ಮಾಹೆಯಲ್ಲಿ ಕಟ್ಟಡ ಕುಸಿದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಅಧಿಕಾರಿಗಳನ್ನು ಹೂಗುಚ್ಛಗಳನ್ನು ನೀಡಿ ಸ್ವಾಗತಿಸಿದರು. ಶಾಲಾ ಕಟ್ಟಡ ಹಾನಿಯಾಗಿರುವ ಬಗ್ಗೆ ಶಾಲಾ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯೋಪಾಧ್ಯಾಯರನ್ನು ಕೇಂದ್ರ ತಂಡದ ಸದಸ್ಯರು ವಿಚಾರಿಸಿದರು. ಪ್ರತಿ ಕೊಠಡಿಗೆ ಭೇಟಿ ನೀಡಿದ ಪರಿಶೀಲಿಸಿದ ಅವರು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ಈ ವೇಳೆ, ಪಕ್ಕದಲ್ಲಿರುವ ಹೊಸ ಕೊಠಡಿಗಳ ಮೇಲೆ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಲು ಉದ್ಧೇಶಿಸಲಾಗಿದೆ. ನರೇಗಾ ಯೋಜನೆಯಡಿ ಜಿಪಂ ವತಿಯಿಂದ ಪಾದಚಾರಿ ಬ್ಲಾಕ್ಸ್ ಅಳವಡಿಸಲಾಗಿರುತ್ತದೆ ಎಂದು ಜಿಪಂ ಸಿಇಒ ದರ್ಶನ ತಿಳಿಸಿದರು.

ಮಳೆ ಹಾನಿ ವೀಕ್ಷಣೆಗೆ ಕೇಂದ್ರ ನೆರೆ ಅಧ್ಯಯನ ತಂಡ..ಎನ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ 79.37 ಕೋಟಿ ರೂ. ನಷ್ಟ

ಶಾಲೆಯಲ್ಲಿ ಗೋದಿ ಉಪ್ಪಿಟ್ಟು ಸವಿದ ತಂಡ : ಗರ್ಲಗುಂಜಿ ಶಾಲೆಯಲ್ಲಿ ಕೇಂದ್ರ ತಂಡದ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರ ಮನವಿಯ ಮೇರೆಗೆ ಗೋಧಿ ಉಪ್ಪಿಟ್ಟು ಸವಿದರು. ಶಾಲೆಯಲ್ಲಿ ತಯಾರಿಸುವ ಆಹಾರದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತೋಪಿನಕಟ್ಟೆಯಲ್ಲಿ ಮನೆಹಾನಿ ಪರಿಶೀಲನೆ: ತೋಪಿನಕಟ್ಟೆಯಲ್ಲಿ ಇತ್ತೀಚಿನ ಮಳೆಯಿಂದ ಹಾನಿಗೊಳಗಾದ ನಾಲ್ಕು ಮನೆಗಳನ್ನು ತಂಡವು ವೀಕ್ಷಿಸಿತು. ಮೊದಲಿಗೆ ಶಾಂತಾ ಹೊಸೂರಕರ ಅವರ ಮನೆಯನ್ನು ಪರಿಶೀಲಿಸಿತು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಸಂಪೂರ್ಣ ಕುಸಿತಗೊಂಡಿರುವುದರಿಂದ ಮೊದಲ ಕಂತಿನ 90 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು. ಸರಕಾರ ನೀಡುವ ಐದು ಲಕ್ಷ ರೂಪಾಯಿ ಬಳಸಿಕೊಂಡು ಉತ್ತಮ ಮನೆ ನಿರ್ಮಿಸಿಕೊಳ್ಳುವಂತೆ ತಂಡದ ಸದಸ್ಯರು ತಿಳಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಾಹೆಯಲ್ಲಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 355 ಕೋಟಿ ರೂಪಾಯಿ ಹಾನಿಯಾಗಿರುತ್ತದೆ. ಎನ್​​​ಡಿಆರ್​ಎಫ್​​. ಮಾರ್ಗಸೂಚಿ ಪ್ರಕಾರ ಒಟ್ಟಾರೆ 79.37 ಕೋಟಿ ರೂಪಾಯಿ ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಮತ್ತೊಂದು ಸಮಗ್ರ ವರದಿಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬೆಳೆ, ರಸ್ತೆ, ಶಾಲಾ ಕಟ್ಟಡ ಸೇರಿದಂತೆ ಮೂಲಸೌಕರ್ಯ ಹಾನಿ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಜಿಲ್ಲಾಡಳಿತದಿಂದ ಮನವರಿಕೆ ಮಾಡಲಾಗಿರುತ್ತದೆ. ಸಭೆಯಲ್ಲಿ ವಿಸ್ತೃತವಾದ ಮಾಹಿತಿಯನ್ನು ಛಾಯಾಚಿತ್ರ ಮತ್ತು ವಿಡಿಯೋ ದಾಖಲೆಗಳ ಸಮೇತ ಕೇಂದ್ರ ತಂಡಕ್ಕೆ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಖಾನಾಪುರದಲ್ಲಿ ಅಂಗನವಾಡಿ ಕೇಂದ್ರಗಳ ಭೇಟಿ: ನಂತರ ಖಾನಾಪುರ ಪಟ್ಟಣದ ಚಿರಮುರಕರ ಹಾಗೂ ಘೋಡೆ ಗಲ್ಲಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ತಂಡವು ಕಟ್ಟಡವನ್ನು ಪರಿಶೀಲಿಸಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಮೂರ್ತಿ ಮತ್ತಿತರರು ಮಳೆ ಹಾನಿ ಬಗ್ಗೆ ಮಾಹಿತಿ ನೀಡಿದರು. ಕೊನೆಗೆ ಹಾರುರಿ ಬಳಿ ಶಿಂಧೂರ-ಹೆಮ್ಮಡಗಾ ರಸ್ತೆ ಹಾನಿಯನ್ನು ಪರಿಶೀಲಿಸಲಾಯಿತು.

ಇದಕ್ಕೂ ಮುನ್ನ ಬೆಳಗಾವಿ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಇತ್ತೀಚಿನ ಅತಿವೃಷ್ಟಿಯಿಂದ ಉಂಟಾದ ಹಾನಿಯನ್ನು ಅಂಕಿ - ಅಂಶಗಳ ಸಮೇತ ವಿವರಿಸಿದರು. ಅತಿವೃಷ್ಟಿಯಿಂದ ಜಿಲ್ಲೆಯ ಸವದತ್ತಿ, ಖಾನಾಪುರ ಹಾಗೂ ನಿಪ್ಪಾಣಿಯಲ್ಲಿ ಮೂರು ಜನ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿರುತ್ತದೆ. ಅಲ್ಲದೇ 34 ಜಾನುವಾರುಗಳ ಜೀವಹಾನಿಯಾಗಿದೆ. ಐದು ತಾಲೂಕಿನಲ್ಲಿ ಒಟ್ಟು 65 ಕುಟುಂಬಗಳು ಪ್ರವಾಹದಿಂದ ಬಾಧಿತವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 14 ಮನೆಗಳು ಸಂಪೂರ್ಣ ಹಾನಿ : ಜಿಲ್ಲೆಯಲ್ಲಿ ಸಂಪೂರ್ಣ, ಭಾಗಶಃ ಸೇರಿದಂತೆ ಒಟ್ಟು 1562 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 14 ಮನೆಗಳು ಮಾತ್ರ ಸಂಪೂರ್ಣವಾಗಿ ಕುಸಿದಿರುತ್ತವೆ. 747 ಭಾಗಶಃ ಹಾಗೂ 801 ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೇಳಿದರು.

ಭತ್ತ, ಜೋಳ, ಗೋವಿನಜೋಳ, ಹೆಸರು, ಸೋಯಾಬಿನ್ ಸೇರಿದಂತೆ 27,341 ಹೆಕ್ಟೇರ್ ಬೆಳೆಯು ಪ್ರವಾಹದಿಂದ ಬಾಧಿತವಾಗಿದೆ. ಅದೇ ರೀತಿ 127.81 ಹೆಕ್ಟೇರ್ ತೋಟಗಾರಿಕೆ ಬೆಳೆ ಕೂಡ ನಷ್ಟವಾಗಿರುತ್ತದೆ. 1330 ಕಿ.ಮೀ. ರಸ್ತೆ, 23 ಸೇತುವೆ, 326 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.

ಇದಲ್ಲದೇ 972 ಪ್ರಾಥಮಿಕ ಶಾಲಾ ಕಟ್ಟಡಗಳು ಮತ್ತು 820 ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಕೂಡ ಅತಿವೃಷ್ಟಿಯಿಂದ ಹಾನಿಯಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿಯನ್ನು ನೀಡಿದರು. ಈ ಎಲ್ಲ ಹಾನಿಗೆ ಸಂಬಂಧಿಸಿದಂತೆ ಛಾಯಾಚಿತ್ರ ಹಾಗೂ ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಲಾಗಿದ್ದು, ಇದನ್ನು ಪರಿಗಣಿಸಿ ಹೆಚ್ಚಿನ ಪರಿಹಾರ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ತಂಡದ ಸದಸ್ಯರಿಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ನಗರ ಯೋಜನಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶುವೈದ್ಯಕೀಯ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ ಕೂಲೇರ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಪ್ರವಾಹ ತಗ್ಗಿದರೂ ಸಹಜ ಸ್ಥಿತಿಗೆ ಬರದ ಬಳ್ಳಾರಿ ಜನರ ಬದುಕು

ABOUT THE AUTHOR

...view details