ಬೆಳಗಾವಿ:ರೈಲ್ವೇ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ರೈಲು ನಿಲ್ದಾಣದಲ್ಲಿ 'ಮಮತೆಯ ತೊಟ್ಟಿಲು ಅಳವಡಿಸಲಾಗಿದ್ದು, ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಚಾಲನೆ ನೀಡಿದರು.
ಬೇಡವಾದ ಹೆಣ್ಣು ಮಗುವನ್ನು ಕಸದ ತೊಟ್ಟಿಯಲ್ಲಿಯೋ? ಗುಂಡಿಯಲ್ಲಿ ಬಿಟ್ಟು ಹೋಗುವ ಪ್ರಕರಣ ಹೆಚ್ಚಾಗಿವೆ. ಇಂಥ ಕಂದಮ್ಮಗಳನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಮಮತೆಯ ತೊಟ್ಟಿಲಲ್ಲಿ ಹಾಕಲು ಈ ವ್ಯವಸ್ಥೆ ಮಾಡಲಾಗಿದೆ. ಪುಟ್ಟ ತೊಟ್ಟಿಲಲ್ಲಿ ಮಗುವನ್ನು ಹಾಕಿ ಬಟನ್ ಒತ್ತಿದ್ರೆ ಸಾಕು ಇದು ರೈಲ್ವೆ ಸಿಬ್ಬಂದಿ ಗಮನಕ್ಕೆ ಬರಲಿದೆ. ಬಳಿಕ ಮಗುವಿಗೆ ಅಗತ್ಯ ಚಿಕಿತ್ಸೆ ನೀಡಿ ಅನಾಥಾಶ್ರಮಕ್ಕೆ ಮಗುವನ್ನು ರವಾನಿಸಿ, ರಕ್ಷಣೆ ಮಾಡುವ ಉದ್ದೇಶವನ್ನು ಮಮತೆಯ ತೊಟ್ಟಿಲು ಹೊಂದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಅಳವಡಿಸಿಕೊಂಡು ಹೆಣ್ಣು ಮಕ್ಕಳು ರಾಣಿ ಚೆನ್ನಮ್ಮಳಂತೆ ಸಾಹಸಿ ಆಗಲಿ. ಗಂಡು ಮಕ್ಕಳು ವಿವೇಕಾನಂದರಂತಾಗಲಿ. ಬೆಳಗಾವಿಯ ಹಿರಿಯವರು ಅನಾಥ ಮಕ್ಕಳಿಗೆ ದಾರಿ ದೀಪವಾಗುತ್ತಿರುವುದಕ್ಕೆ ಸಂತಸ ತಂದಿದೆ. ರಾಜ್ಯದ ಎಲ್ಲ ರೈಲ್ವೇನಿಲ್ದಾಣದಲ್ಲಿ ತಾಯಿಯ ಮಡಿಲನ್ನು ಇಡಲಾಗಿದೆ. ಮಕ್ಕಳಿಗೆ ಅನಾಥ ಪ್ರಜ್ಞೆ ಬಾರದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಲಿದೆ ಎಂದರು.