ಬೆಳಗಾವಿ/ಬೆಂಗಳೂರು:ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ಬರುವ ಹಣ ಕಡಿಮೆಯಾಗುತ್ತಿದೆ. ಹಾಗಾಗಿ ರಾಜ್ಯದ ಮೇಲಿನ ಅವಲಂಬನೆಯೇ ಹೆಚ್ಚಾಗುತ್ತಿದೆ. ಇದರಿಂದ ನಮ್ಮ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೆಲ ಯೋಜನೆಗಳಿಗೆ ಹಣ ಬಂದಿದೆ. ಇನ್ನು ಕೆಲವು ಯೋಜನೆಗಳಿಗೆ ಹಣ ಬಂದಿಲ್ಲ. ಬರುವ ನಿರೀಕ್ಷೆ ಇದೆ. ಮಾರ್ಚ್‌ವರೆಗೂ ಸಮಯ ಇದೆ. ಹಾಗಾಗಿ ಕೊಡುವ ನಿರೀಕ್ಷೆಯಲ್ಲಿ ನಮ್ಮ ಸರ್ಕಾರ ಇದೆ ಎಂದರು.
ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಶೇ.25ರಷ್ಟು ಅನುದಾನ ಕಡಿತವಾಗಿದೆ. ಇದಕ್ಕಾಗಿ 5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿದ್ದರೂ ಅದು ಕೊಟ್ಟಿಲ್ಲ. ಅಂತಿಮ ವರದಿ ಕೊಟ್ಟಾಗ 6 ಸಾವಿರ ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿದ್ದರು. ಈ ಎರಡೂ ಅನುದಾನ ನಮಗೆ ಬಂದಿಲ್ಲ. ಈ ಸಂಬಂಧ ಅಕ್ಟೋಬರ್ನಲ್ಲಿ 11,695 ಕೋಟಿ ಅನುದಾನ ಬಿಡುಗಡೆ ಮಾಡಿ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಯಾವುದೇ ಉತ್ತರ ಬಂದಿಲ್ಲ. ಹಣವೂ ಬಂದಿಲ್ಲ. ಜಿಎಸ್ಟಿ ಪರಿಹಾರ 2,333 ಕೋಟಿ ಬಾಕಿ ಇತ್ತು. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದು, 1,191 ಕೋಟಿ ರೂ ಬಿಡುಗಡೆಯಾಗಿದೆ. ಇನ್ನು1,141 ಕೋಟಿ ಬಾಕಿ ಇದೆ. ಇವರೆಡೂ ಕೇಂದ್ರದಿಂದ ಬರಬೇಕಿದೆ, ಎರಡಕ್ಕೂ ಪ್ರಯತ್ನ ಮಾಡಿದ್ದೇವೆ. ಇನ್ನು ಬಿಡುಗಡೆಯಾಗಿಲ್ಲ ಎಂದು ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಹಣಕಾಸಿನ ಗಾತ್ರ ಕಡಿಮೆಯಾಗುತ್ತಿದೆ. ಕೇಂದ್ರಕ್ಕೆ ಬರುವ ಒಟ್ಟು ತೆರಿಗೆಯಲ್ಲಿ ನಮ್ಮ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ ಅನುದಾನ, ಹೀಗೆ ಎರಡು ರೀತಿ ನಮಗೆ ಕೇಂದ್ರದಿಂದ ಅನುದಾನ ಬರಲಿದೆ. ಎರಡನ್ನೂ ನೋಡಿದರೆ ಈ ಬಾರಿ 56 ಸಾವಿರ ಕೋಟಿ ಬರಬಹುದು ಎಂದು ಅಂದಾಜಿಸಿದ್ದೇವೆ. ಈ ಬಾರಿ ನಮ್ಮ ಬಜೆಟ್ 3.27 ಲಕ್ಷ ಕೋಟಿ ಇದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಾಗ 2017-18ರಲ್ಲಿ 43,369 ಕೋಟಿ ಬಂದಿತ್ತು. ಅಂದು ನಮ್ಮ ಬಜೆಟ್ 1.86 ಲಕ್ಷ ಕೋಟಿ ಇತ್ತು. ನಮ್ಮ ಬಜೆಟ್ನ ಶೇ.23ರಷ್ಟು ಹಣ ಕೇಂದ್ರದಿಂದ ಬಂದಿತ್ತು. ಈ ವರ್ಷ ಇದು ಶೇ.17.5ಕ್ಕೆ ಇಳಿದಿದೆ. ಅದೇ ಶೇ. 23ರಷ್ಟು ಇದ್ದಿದ್ದರೆ 76 ಸಾವಿರ ಕೋಟಿ ಬರುತ್ತಿತ್ತು. ಆದರೆ ನಮ್ಮ ಅಂದಾಜು ಇರುವುದು 56 ಸಾವಿರ ಕೋಟಿ ಮಾತ್ರ. ಜಿಎಸ್ಟಿ ಪರಿಹಾರದಲ್ಲಿಯೂ 23 ಸಾವಿರ ಕೋಟಿ ರೂ. ಬರುವುದು ಕಡಿಮೆಯಾಗಿದೆ. ಎಲ್ಲ ನೋಡಿದರೆ 40 ಸಾವಿರ ಕೋಟಿ ಹಣ ಕೇಂದ್ರದಿಂದ ಬರಬೇಕಿರುವುದು ಕಡಿಮೆಯಾಗಿದೆ ಎಂದು ವಿವರಿಸಿದರು.