ಬೆಳಗಾವಿ:ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಲ್ಲ. ಬೆಲೆ ಏರಿಕೆ ಪಂಚರಾಜ್ಯ ಚುನಾವಣೆ ವೇಳೆ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ಕಾರಣಕ್ಕೆ ದೇಶದಲ್ಲಿ ಇಂಧನ ಬೆಲೆ ಹೆಚ್ಚಾಗಿದೆ. ಕೊರೊನಾ ಹೆಚ್ಚಿದ್ದ ಸಮಯದಲ್ಲಿ ದೇಶದಲ್ಲಿ ಇಂಧನ ಬೆಲೆ ಕಡಿಮೆ ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯ ಆಧಾರದ ಮೇಲೆಯೇ ಎಲ್ಲಾ ದೇಶಗಳಲ್ಲಿ ತೈಲ ಬೆಲೆ ಏರಿಕೆಯಾಗುತ್ತದೆ. ತೈಲ ಬೆಲೆ ಏರಿಕೆಯಿಂದಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ. ಇದಕ್ಕೆ ಕೇಂದ್ರ ಸರ್ಕಾರ ಕಾರಣವಲ್ಲ. ಅಲ್ಲದೇ ಇದರಿಂದ ಪಂಚರಾಜ್ಯ ಆಗಲಿ, ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಕೇಂದ್ರದಲ್ಲಿರುವ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿರುವ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಮೇಲೆ ಜನರಿಗೆ ಅಪಾರ ನಂಬಿಕೆ ಇದೆ. ನಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಮತ ನೀಡುತ್ತಾರೆ. ನನಗೆ ಸೇರಿ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಅವರಿಗೆ ಬಸವಕಲ್ಯಾಣ ಕ್ಷೇತ್ರದ ಉಸ್ತುವಾರಿ ನೀಡಿದ್ದಾರೆ. ಅಭ್ಯರ್ಥಿ ಯಾರೇ ಆಗಲಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ಪಡೆದು ಅಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ. ನಾನು ಪರಿಷತ್ ಸದಸ್ಯನಿದ್ದೇನೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.
ಓದಿ:ಎಸ್‌ಜೆಪಿ ಕಾಲೇಜ್ ಕ್ಯಾಂಪಸ್ಗೆ 'ನಾಲ್ವಡಿ ಕ್ಯಾಂಪಸ್' ಎಂದು ನಾಮಕರಣ: ಅಶ್ವತ್ಥ ನಾರಾಯಣ
ನನ್ನ ಪುತ್ರನೂ ಸಿಂದಗಿಯಿಂದ ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಪುತ್ರ ಚಿದಾನಂದ ಕೂಡ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು ಆ ರೀತಿ ಹೇಳುತ್ತಿದ್ದಾರಷ್ಟೇ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಬಸವಕಲ್ಯಾಣ ಜೊತೆಗೆ ಬೆಳಗಾವಿ, ಸಿಂದಗಿ ಹಾಗೂ ಮಸ್ಕಿಯಲ್ಲೂ ಪ್ರಚಾರ ನಡೆಸುತ್ತೇನೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸಾಕಷ್ಟು ಜನ ಅಭ್ಯರ್ಥಿಗಳಿದ್ದಾರೆ. ಪ್ರತ್ಯೇಕ ನೋಟಿಫಿಕೇಶನ್ ಆದ ಬಳಿಕವೇ ಅಭ್ಯರ್ಥಿಗಳ ಹೆಸರನ್ನು ಕೋರ್ ಕಮಿಟಿಯಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ನಮ್ಮ ದೆಹಲಿ ನಾಯಕರೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ ಎಂದರು.