ಚಿಕ್ಕೋಡಿ(ಬೆಳಗಾವಿ): ದೇಶದಲ್ಲಿ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸುವ ಸಂಸ್ಥೆಗಳು, ಭಯೋತ್ಪಾದನಾ ಕೃತ್ಯಗಳಿಗೆ ಪ್ರೇರಣೆ ನೀಡುವ ಶಕ್ತಿಗಳನ್ನ ನಿಯಂತ್ರಣ ಮಾಡುವ ದೃಷ್ಟಿಯಿಂದ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕಾಗವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರದಿಂದ ದೇಶದಲ್ಲಿ ಪಿಎಫ್ಐ ಸಂಘಟನೆ ಬ್ಯಾನ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿಯವರ ಕಾರ್ಯವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
ಭಜರಂಗದಳವನ್ನು ಬ್ಯಾನ್ ಮಾಡಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೊಂದು ಸಂಸ್ಥೆ ಅನೋ ಕಾರಣಕ್ಕೆ ಬ್ಯಾನ್ ಮಾಡಿಲ್ಲ. ಧಾರ್ಮಿಕ, ರಾಜಕೀಯ ಪಕ್ಷ ಆಗಿದ್ದರೂ ನಿಷೇಧ ಆಗುತ್ತಿರಲಿಲ್ಲ. ಆದ್ರೆ, ನೇರವಾಗಿ ಗುಪ್ತಚರ ಇಲಾಖೆ, ಎನ್ಐಎ ತನಿಖೆ ಆಧಾರದ ಮೇಲೆ ಬಂದಿರುವ ಮಾಹಿತಿ ಹತ್ತಾರು ಕೊಲೆಗಳು, ಹತ್ಯೆಗಳ ಹಿಂದೆ ಈ ಸಂಸ್ಥೆ ಇದೆ. ಭಯೋತ್ಪಾದಕರ ಜೊತೆಗೂ ನೇರವಾಗಿ ಸಂಬಂಧ ಇರುವುದರಿಂದ ಪಿಎಫ್ಐ ಸಂಘಟನೆ ನಿಷೇಧ ಮಾಡಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದನ್ನೂ ಓದಿ:ಪಿಎಫ್ಐ ಬೆಳೆಯಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಕಾರಣ: ಸಚಿವ ಸುನಿಲ್ ಕುಮಾರ್
ತನಿಖೆಯ ಆಧಾರದ ಮೇಲೆ ನಿಷೇಧ ಮಾಡಲಾಗಿದೆ. ಒಂದೆರೆಡು ದಿನಗಳಲ್ಲಿ ನಿಷೇಧ ಮಾಡಿಲ್ಲ. ಆರೇಳು ವರ್ಷಗಳಿಂದ ಅದರ ಹಿಂದೆ ಬಿದ್ದು, ಎಲ್ಲವನ್ನೂ ತನಿಖೆ ಮಾಡಿ ಅದರಲ್ಲಿ ಬಂದಿರುವ ವರದಿ ಆಧಾರದಲ್ಲಿ ನಿಷೇಧ ಮಾಡಲಾಗಿದೆ. ದೇಶದಲ್ಲಿನ ಯಾವುದೇ ಸಂಸ್ಥೆಗಳ ಭಯೋತ್ಪಾದಕ ಚಟುವಟಿಕೆಗಳನ್ನ ಬಿಜೆಪಿ ಸರ್ಕಾರ ಸಹಿಸುವುದಿಲ್ಲ. ರಾಷ್ಟ್ರೀಯ ವಿರೋಧಿ ಕೃತ್ಯಗಳಲ್ಲಿ ಯಾರು ತೊಡಗುತ್ತಾರೆ. ಅವರಿಗೆ ಇದೇ ಗತಿ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.