ಬೆಳಗಾವಿ:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸದ್ಯದ ಮಟ್ಟಿಗೆ ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಎಸ್ಐಟಿ ಯಾವ ಹಂತಕ್ಕೆ ತನಿಖೆ ಮಾಡಲಿದೆ ಎಂಬುವುದನ್ನು ಕಾದು ನೋಡಬೇಕಿದೆ. ಆದರೆ ತನಿಖೆಯನ್ನು ಎಸ್ಐಟಿಗೆ ವಹಿಸಿರುವುದನ್ನು ನಾವು ಸದ್ಯಕ್ಕೆ ಸ್ವಾಗತ ಮಾಡುತ್ತೇವೆ. ಸಿಡಿ ಪ್ರಕರಣದ ಕುರಿತು ಈವರೆಗೆ ಕೇಸ್ ದಾಖಲಾಗಿಲ್ಲ. ವಿಚಾರಣೆ ಮಾಡುವ ಅಧಿಕಾರ ಮಾತ್ರ ಎಸ್ಐಟಿಗೆ ಕೊಟ್ಟಿದ್ದಾರೆ. ನಿನ್ನೆ ಗೃಹ ಸಚಿವರು ಎಫ್ಐಆರ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಇಲ್ಲವಾದರೆ ರಮೇಶ್ ಅವರೇ ಖುದ್ದಾಗಿ ದೂರು ಕೊಡಬೇಕು. ಈಗ ಎರಡೇ ಆಯ್ಕೆ ಇದೆ. ಒಂದು ರಮೇಶ್ ಜಾರಕಿಹೊಳಿ ದೂರು ಕೊಡಬೇಕು, ಇಲ್ಲವೆ ಎಸ್ಐಟಿಯ ತನಿಖಾ ವರದಿ ಆಧರಿಸಿ ಸರ್ಕಾರವೇ ಎಫ್ಐಆರ್ ದಾಖಲಿಸುವ ನಿರ್ಧಾರ ಮಾಡಬೇಕು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ತನಿಖೆ ಆದ್ಮೇಲೆ ಎಲ್ಲಾ ಗೊತ್ತಾಗುತ್ತೆ. ಈಗ ಊಹಾಪೋಹ ಅಷ್ಟೇ.
ಈ ಪ್ರಕರಣದಿಂದ ಜಾರಕಿಹೊಳಿ ಕುಟುಂಬಕ್ಕೆ ಮುಜುಗರ ಆಗಿರಬಹುದು. ನಮ್ಮ ಬೆಂಬಲಿಗರು, ನಮ್ಮ ಶಕ್ತಿ, ವೋಟ್ ಬ್ಯಾಂಕ್ ಮೇಲೆ ಯಾವುದೇ ಪರಿಣಾಮ ಆಗಲ್ಲ. ಪ್ರಕರಣದ ಸುಖಾಂತ್ಯಕ್ಕೆ ಪೊಲೀಸ್ ತನಿಖಾ ವರದಿಯೇ ಪರಿಹಾರ. ಪ್ರಕರಣದ ಹಿಂದೆ 2+ 4+ 3 ಇದ್ದಾರೆಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್, ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ಮಾಡಿದಾಗ ಅದನ್ನ ಹೇಳಿದ್ದಾರೆ ಎಂದರು.