ಬೆಳಗಾವಿ: ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ದಾಳಿಗೆ ಕಾಂಗ್ರೆಸ್ ನವರು ಆರಂಭದಲ್ಲಿ ಖುಷಿ ಪಡಬಹುದು. ಆದರೆ, ಆ ಲೋಕಾಯುಕ್ತಕ್ಕೆ ಬಲ ತುಂಬಿದವರೇ ನಾವು ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದರು. ಅವರು ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿ, ತಮ್ಮ ಮೇಲಿನ ಪ್ರಕರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ನವರು ಲೋಕಾಯುಕ್ತವನ್ನು ಮುಚ್ಚಿಹಾಕಿ ಎಸಿಬಿಯನ್ನು ರಚನೆ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಕೆಂಪಣ್ಣ ಅವರು ತೀರ್ಪಿನಲ್ಲಿ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊನ್ನೆ ಅಧಿವೇಶನದಲ್ಲಿ ಓದಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಮೇಲೆ ಇನ್ನೂ ಲೋಕಾಯುಕ್ತದಲ್ಲಿ 50 ಪ್ರಕರಣಗಳು ಬಾಕಿ ಉಳಿದಿದೆ, ನಮ್ಮವರದು ಏನೋ ಒಂದು ಸಣ್ಣ ಪ್ರಕರಣ ಆಗಿದೆಯೆಂದು ಕಾಂಗ್ರೆಸ್ ನವರು ಖುಷಿ ಪಡಬಹುದು ಅವರು ಖುಷಿ ಪಡುವ ಅಗತ್ಯವಿಲ್ಲ ಗಾಜಿನ ಮನೆಯಲ್ಲಿ ಅವರು ಕುಳಿತಿದ್ದಾರೆ, ಲೋಕಾಯುಕ್ತಕ್ಕೆ ಒಳ್ಳೆ ದಾರಿಗೆ ತಂದವರು ನಾವು ಬಲ ತುಂಬಿದವರು ನಾವು ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು 800 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಕೆಂಪಣ್ಣ ಅವರ ಆಯೋಗದಲ್ಲಿ ವರದಿಯಲ್ಲಿ ಉಲ್ಲೇಖವಾಗಿದೆ. ವರದಿಯನ್ನು ಯಾಕೆ ಇವರು ಸದನಕ್ಕೆ ಸಲ್ಲಿಸಲಿಲ್ಲ ಎಂದು ಸಚಿವರು ಕಾಂಗ್ರೆಸ್ನವರಿಗೆ ಪ್ರಶ್ನೆ ಮಾಡಿದರು. ಅವರೇ ರಚನೆ ಮಾಡಿರುವ ಕೆಂಪಣ್ಣನವರ ಆಯೋಗದ ಬಗ್ಗೆ 800 ಎಕರೆ ಡಿ ನೋಟಿಫಿಕೇಶನ್ ಬಗ್ಗೆ ಮೊನ್ನೆ ಸದನದಲ್ಲಿ ಸಿಎಂ ಪ್ರಸ್ತಾಪಿಸಿದ್ದಾರೆ. ಅದು ಚರ್ಚೆಗೆ ಬರುತ್ತದೆ ಎಂದು ಸಿದ್ದರಾಮಯ್ಯ ಅವರು ಸದನಕ್ಕೆ ಗೈರಾಗುತ್ತಾರೆ. ನಾನು ಇಲ್ಲದ ಸಮಯದಲ್ಲಿ ಮಾತನಾಡಿದ್ದಾರೆ ಎಂದು ವ್ಯರ್ಥ ಟೀಕೆಗಳನ್ನು ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
40 ಪರ್ಸೆಂಟೇಜ್ಗೆ ಇದು ಒಂದು ಸಾಕ್ಷಿ ಎಂಬ ಡಿಕೆಶಿ ಹೇಳಿಕೆ ವಿಚಾರ: ಕಳೆದ ಮೂರು ಅದಿವೇಶನದಿಂದ ಶೇ40ರಷ್ಟು ಎಂದು ಮಾತನಾಡುತ್ತಿದ್ದಾರೆ, ಸದನದಲ್ಲಿ ಇದರ ಬಗ್ಗೆ ಒಂದು ದಿನ ಆದರೂ ಚರ್ಚೆ ಮಾಡಿದ್ರಾ, ಬೆಳಗಾವಿ ಅಧಿವೇಶನದಿಂದ ಶೇ40ರಷ್ಟು ಕಮಿಷನ್ ಎಂದು ಹೇಳುತ್ತಿದ್ದಾರೆ ಒಂದು ದಿನವಾದರೂ ಜವಾಬ್ದಾರಿತನ ಚರ್ಚೆ ಮಾಡುವುದನ್ನ ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸುವ ವ್ಯರ್ಥ ಪ್ರಯತ್ನ ಮಾಡುತ್ತಾರೆ ಎಂದು ಸಿ ಸಿ ಪಾಟೀಲ್ ಕಾಂಗ್ರೆಸ್ ನಾಯಕರು ವಿರುದ್ಧ ಅಸಮಾಧಾನ ಹೊರಹಾಕಿದರು.