ಚಿಕ್ಕೋಡಿ : ಕೊರೊನಾ ಮಹಾಮಾರಿಯಿಂದ ದನಗಳ ವ್ಯಾಪಾರಸ್ಥರು ಕೂಡಾ ಕಳೆದ ಆರು ತಿಂಗಳಿನಿಂದ ಸಂತೆಗಳಿಲ್ಲದೆ ಮನೆ ನಡೆಸುವುದು ಕಷ್ಟವಾಗಿತ್ತು. ಈಗ ಜಿಲ್ಲೆಯ ಮೂಡಲಗಿ ಪಟ್ಟಣದ ದನದ ಸಂತೆ ಪ್ರಾರಂಭವಾಗಿದ್ದು ರೈತರು ಹಾಗೂ ವ್ಯಾಪಾರಸ್ಥರು ಪುಲ್ ಖುಷಿ ಆಗಿದ್ದಾರೆ.
ಆರು ತಿಂಗಳ ಬಳಿಕ ಮೂಡಲಗಿ ಸಂತೆ ಪ್ರಾರಂಭ; ವ್ಯಾಪಾರಸ್ಥರು ಖುಶ್
ಕೊರೊನಾ ಲಾಕ್ಡೌನ್ನಿಂದ ಬಂದ್ ಆಗಿದ್ದ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಸಂತೆ ಆರಂಭವಾಗಿದೆ. ಇದರಿಂದ ರೈತರು ಮತ್ತು ವ್ಯಾಪಾರಸ್ಥರಲ್ಲಿ ಮಂದಹಾಸ ಮೂಡಿದೆ.
ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಪಡೆದ ಮೂಡಲಗಿ ಜಾನುವಾರು ಪೇಟೆಯಲ್ಲಿ ಮೂರು ದಿನಗಳವರೆಗೆ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳ ವ್ಯಾಪಾರ ವಹಿವಾಟು ನಡೆಯುತ್ತದೆ. ಈ ದನಗಳ ಪೇಟೆಯಲ್ಲಿ ಹೊರ ರಾಜ್ಯಗಳಿಂದ ವಿವಿಧ ತಳಿಯ ಜಾನುವಾರುಗಳು ಆಗಮಿಸುತ್ತವೆ. ಗುಜರಾತ್, ಗೋವಾ ಎಮ್ಮೆಗಳಿಗೆ ಇಲ್ಲಿ ಎಲ್ಲಿಲ್ಲದ ಬೇಡಿಕೆ. ಸದ್ಯ ಈ ಸಂತೆ ಎರಡು ದಿನಗಳವರೆಗೆ ನಡೆಯುತ್ತದೆ. ಇಲ್ಲಿನ ದನಗಳನ್ನು ಖರೀದಿ ಮಾಡಲು ಮಹಾರಾಷ್ಟ್ರ, ಗೋವಾ, ತಮಿಳನಾಡು ಹೀಗೆ ಹಲವಾರು ರಾಜ್ಯಗಳಿಂದ ವ್ಯಾಪಾರಸ್ಥರು ಬರುತ್ತಾರೆ.
ಆದರೆ ಈ ಬಾರಿ ಹೊರ ರಾಜ್ಯಗಳಿಂದ ದನಗಳು ಹಾಗೂ ವ್ಯಾಪಾರಸ್ಥರು ಬರುತ್ತಿಲ್ಲ. ದನಗಳ ವ್ಯಾಪಾರ ವಹಿವಾಟು ತಕ್ಕ ಮಟ್ಟಿಗೆ ನಡೆಯುತ್ತಿದೆ ಎನ್ನುತ್ತಾರೆ ವ್ಯಾಪಾರಸ್ಥರು. ಮೇಕೆ, ಕುರಿ, ಆಕಳು, ಹೋರಿಗಳೂ ಇಲ್ಲಿ ಭರಪೂರ. ದನಗಳ ಪೇಟೆಯಲ್ಲಿಯ ಹೊಟೇಲ್, ಖಾನಾವಳಿ, ಮೇವು ಮಾರಾಟಗಾರರಿಗೆ, ವ್ಯಾಪಾರಸ್ಥರಿಗೆ, ದಲ್ಲಾಳಿಗೆ ಹೋದ ಜೀವ ಪುನಃ ಬಂದಂತಾಗಿದೆ.