ಬೆಳಗಾವಿ:ಜೆಡಿಎಸ್ ಜಾತ್ಯಾತೀತ ಪಕ್ಷವಲ್ಲ. ಹಂಡ್ರೆಡ್ ಪರ್ಸೆಂಟ್ ಜಾತಿಯ ಪಕ್ಷ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ ಬಿಟ್ಟು ರಾಜಕಾರಣ ಮಾಡಿದ್ರೆ ಜೆಡಿಎಸ್ ಜೀರೋ ಆಗಿಬಿಡುತ್ತದೆ. ಜೆಡಿಎಸ್ ವರಿಷ್ಠ ದೇವೇಗೌಡರ ಆಮ್ಲಜನಕವೇ ಜಾತಿ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಉಸಿರಾಟ ಇರುವುದು ಜಾತಿಯಲ್ಲಿಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಾತಿಯ ಪಕ್ಷ ಎಂದು ದೇವೇಗೌಡರು ಟೀಕಿಸಿದ್ದಾರೆ. ಆದರೆ ಬಿಜೆಪಿ ಎಂದೂ ಜಾತಿಯ ಆಧಾರದ ಮೇಲೆ ರಾಜಕಾರಣ ಮಾಡುವುದಿಲ್ಲ. ಬಿಜೆಪಿ ವಿಚಾರ ಹಾಗೂ ನಂಬಿಕೆ ಆಧಾರದ ಮೇಲೆ ನಿಂತಿರುವ ಪಕ್ಷ ಎಂದು ದೇವೇಗೌಡರಿಗೆ ತಿರುಗೇಟು ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಹಗಲು ನಾಟಕವಾಗಿದೆ. ಸಾರ್ವಜನಿಕರ ಹಣದಲ್ಲಿ ಜೆಡಿಎಸ್ ಜಾತ್ರೆ ನಡೆಸುತ್ತಿದೆ. ಜೆಡಿಎಸ್ ಶಾಸಕರಿರುವ ಕ್ಷೇತ್ರದಲ್ಲಿ ಮಾತ್ರ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಸರ್ಕಾರದ ದುಡ್ಡಲ್ಲಿ ಜಾತ್ರೆ ಮಾಡುವ ನೈತಿಕತೆ ಸಿಎಂಗೆ ಇಲ್ಲ. ಹೆಚ್ಡಿಕೆ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.