ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯೊಬ್ಬರು ವಿಜಯೋತ್ಸವದ ಸಂಭ್ರಮದ ನಡುವೆಯೂ ಅನಾಥ ಶವದ ಅಂತ್ಯಕ್ರಿಯೆ ನಡೆಸಿ ಮಾದರಿಯಾಗಿರುವ ಘಟನೆ ನಡೆದಿದೆ.
ನಗರದ ಗಣಾಚಾರಿ ಗಲ್ಲಿಯ ನಿವಾಸಿ ಶಂಕರ ಪಾಟೀಲ ಎಂಬವರು ಸೆ.3ರಂದು ನಡೆದ ಚುನಾವಣೆಯಲ್ಲಿ 7ನೇ ವಾರ್ಡ್ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇತ್ತ ಗೆಲುವಿನ ಸಂಭ್ರಮದ ನಡುವೆಯೂ ಅನಾಥ ಶವಕ್ಕೆ ಅಂತ್ಯಕ್ರಿಯೆ ನಡೆಸಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಾಮಾಜಿಕ ಕಾರ್ಯ ನೆರವೇರಿಸಿದ್ದಾರೆ.
ತಡರಾತ್ರಿ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಅನಾಥ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಶಂಕರ ಪಾಟೀಲ ಸಂಭ್ರಮವನ್ನು ಬಿಟ್ಟು ಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಬಳಿಕ ಶವ ಸದಾಶಿವ ನಗರದಲ್ಲಿರುವ ಸ್ಮಶಾನಕ್ಕೆ ತಂದು ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಕೊರೊನಾದಿಂದ ಪ್ರಾಣ ಕಳೆದುಕೊಂಡ 300ಕ್ಕೂ ಹೆಚ್ಚುಅನಾಥ ಶವದ ಅಂತ್ಯ ಸಂಸ್ಕಾರವನ್ನು ಶಂಕರ ಪಾಟೀಲ ನೆರವೇರಿಸಿದ್ದರು. ಇನ್ನು ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಜನರ ಸೇವೆ ಮಾಡುತ್ತ ಬಂದಿರುವ ಶಂಕರ ಪಾಟೀಲ ಪಾಲಿಕೆಯಲ್ಲಿ ಗೆಲುವು ಸಾಧಿಸಿದ್ದಾರೆ.