ಬೆಳಗಾವಿ:ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅಡಿಯಲ್ಲಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಏಕರೂಪದ ಬೆಲೆ ನಿಗದಿಪಡಿಸಿ ತೀರ್ಪನ್ನು ರಚಿಸುವ ಮೂಲಕ ಪರಿಹಾರ ವಿತರಿಸಲು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.
ಕೃಷ್ಣಾ ನದಿಯ ಎಡದಂಡೆಯಲ್ಲಿ ಮುಳುಗಡೆಯಾಗಲಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳು ಕೊಲ್ಹಾರ ತಾಲ್ಲೂಕಿನ 6 ಗ್ರಾಮಗಳು, ನಿಡಗುಂದಿ ತಾಲ್ಲೂಕಿನ 9 ಗ್ರಾಮಗಳು ಮುಳುಗಡೆ ಹೊಂದುತ್ತಿವೆ.
ಮುಳಗುಡೆ ಹೊಂದಲಿರುವ ಜಮೀನುಗಳ ಭೂ ಪರಿಹಾರದಲ್ಲಿ ವ್ಯತ್ಯಾಸ ಉಂಟಾಗಿ 2016-17ರಲ್ಲಿ ಈ ಗ್ರಾಮಗಳು ಮಾರ್ಗದರ್ಶಿ ಬೆಲೆ ಪರಿಷ್ಕೃತಗೊಂಡ ನಂತರ ಈವರೆಗೆ ಪರಿಷ್ಕೃತಗೊಳ್ಳದೇ ಇರುವುದರಿಂದ ರೈತರಿಗೆ ಆಗಿರುವ ಘೋರ ಅನ್ಯಾಯವನ್ನು ಪರಿಗಣನೆಗೆ ತೆಗೆದುಕೊಂಡು ಏಕರೂಪದ ಬೆಲೆ ಮತ್ತು ಸಮ್ಮತಿ ತೀರ್ಪನ್ನು ರಚಿಸಲು ಅನುಮೋದನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಗ್ರಾಮಗಳಲ್ಲಿ ಪ್ರತೀ ಎಕರೆ ಒಣ ಭೂಮಿಗೆ 5.00 ಲಕ್ಷ ರೂಪಾಯಿ ಹಾಗೂ ಪ್ರತೀ ಎಕರೆ ನೀರಾವರಿ/ಬಾಗಾಯತ್ ಭೂಮಿಗೆ 6.00 ಲಕ್ಷ ರೂಪಾಯಿ ಮತ್ತು ಕಟ್ಟಡಗಳಿಗೆ ಸವಕಳಿರಹಿತವಾಗಿ ಪ್ರತಿಶತ 20%ರಷ್ಟು ಹೆಚ್ಚುವರಿ ಮೊತ್ತವನ್ನು ಸೇರಿಸಿ, ಪರಿಹಾರವನ್ನು ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ಈ ಐತಿಹಾಸಿಕ ತೀರ್ಮಾನ ವಿಜಯಪುರ ಜಿಲ್ಲೆಯ ಬಬಲೇಶ್ವರ, ನಿಡಗುಂದಿ ಮತ್ತು ಕೊಲ್ಹಾರ ತಾಲ್ಲೂಕುಗಳಲ್ಲಿ ಹೋರಾಟ ಮಾಡಿಕೊಂಡು ಬಂದ ರೈತರಿಗೆ ಗೌರವಿಸಿದಂತಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.