ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಈಟಿವಿ ಭಾರತ ಜೊತೆ ಮಾತನಾಡಿದರು. ಬೆಳಗಾವಿ:ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ಕಾನೂನಿನಲ್ಲಿ ಅವಕಾಶ ಇಲ್ಲ. ಅದಕ್ಕೆ ಸರ್ಕಾರದಲ್ಲಿ ನಿಯಮಾವಳಿಗಳಿಲ್ಲ. ಅದಕ್ಕೂ ಮೀರಿ ಸ್ಥಾನಮಾನ ನೀಡಿದರೆ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಹಾಕಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಂಪುಟ ದರ್ಜೆ ಸ್ಥಾನ:ಬೆಳಗಾವಿಯಲ್ಲಿ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ವಂಚಿತರಾಗಿ ಅತೃಪ್ತರಾಗಿರುವ ಶಾಸಕರನ್ನು ಸಮಾಧಾನ ಪಡಿಸುವ ಉದ್ದೇಶದಿಂದ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಆದರೆ, ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ಸಂಪುಟ ದರ್ಜೆ ಸ್ಥಾನಮಾನಗಳನ್ನು ನೀಡುವ ಕುರಿತು ಸರ್ಕಾರದಲ್ಲಿ ಯಾವುದೇ ನಿರ್ದಿಷ್ಟ ನಿಯಮಾವಳಿಗಳು ಇರುವುದಿಲ್ಲ. ಆದರೆ, ಮುಖ್ಯಮಂತ್ರಿಗಳ ವಿವೇಚನೆ ಅನುಸಾರ ಅವರು ಸೂಚಿಸಿದವರಿಗೆ ಸಂಪುಟ ದರ್ಜೆಯ ಸ್ಥಾನಮಾನಗಳನ್ನು ನೀಡಲಾಗುವುದು ಎಂದು ಶಿಷ್ಟಾಚಾರ ಇಲಾಖೆಯ ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ವಿವೇಚನಾನುಸಾರ ಚಲಾಯಿಸುವ ಆದೇಶ/ನಿರ್ಣಯಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳಾಗಲಿ/ಸುತ್ತೋಲೆಗಳಾಗಲಿ ಶಿಷ್ಟಾಚಾರ ಇಲಾಖೆಯಲ್ಲಿ ಲಭ್ಯವಿರುವುದಿಲ್ಲ ಎಂದು ದಿ: 19-06-2023 ರಂದು ತಿಳಿಸಿರುವ ಶಿಷ್ಟಾಚಾರ ಇಲಾಖೆಯ ಅಧಿಕಾರಿಗಳು, ಮಾಹಿತಿ ಹಕ್ಕಿನ ಈ ಅರ್ಜಿಯನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ಹಾಗೂ ಡಿ.ಪಿ.ಎ.ಆರ್. ಅಧೀನದಲ್ಲಿಯೇ ಬರುವ (ಸೇವಾ ನಿಯಮಗಳು-ಸಿ) ಶಾಖೆಗೂ ವರ್ಗಾಯಿಸಿದ್ದಾರೆ. ಇವರಿಂದ ಕೂಡಾ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಕುರಿತು ಮಾಹಿತಿ ಲಭ್ಯ ಆಗಿರುವುದಿಲ್ಲ ಎಂಬ ದಾಖಲೆಗಳನ್ನು ಸಹ ಸರ್ಕಾರಕ್ಕೆ ಬರೆದ ಪತ್ರದೊಂದಿಗೆ ಎಂದು ವಿವರಣೆ ನೀಡಿದರು.
ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಕೂಡ ಮುಖ್ಯಮಂತ್ರಿಗಳ ವಿವೇಚನಾ ಅನುಸಾರವಾಗಿ ಸಂಪುಟ ದರ್ಜೆ ಸ್ಥಾನಮಾನ ನೀಡುವುದರ ಬಗ್ಗೆ ಯಾವುದೇ ದಾಖಲೆಗಳು ಇರುವುದಿಲ್ಲ. ಅಂದ ಮೇಲೆ ಯಾವ ನಿಯಮಗಳನ್ನು ಆಧರಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ಪ್ರತಿಯೊಂದು ನಿಗಮ ಮಂಡಳಿಗಳಿಗೆ ಅದರದ್ದೇ ಆದ ಇಲಾಖೆ ಇದ್ದು, ಅದಕ್ಕೆ ಐಎಎಸ್ ಶ್ರೇಣಿಯ ಪ್ರಧಾನ ಕಾರ್ಯದರ್ಶಿಗಳು, ಸಚಿವರು ಇದ್ದಾಗಲೂ ನಿಗಮ ಮಂಡಳಿಗಳ ಅಧ್ಯಕ್ಷರನ್ನು ನೇಮಿಸುವುದು ಸರಿಯಲ್ಲ. ಶಾಸಕರಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡುವುದನ್ನು ನಿಲ್ಲಿಸದೇ ಇದ್ದಲ್ಲಿ ಸರಕಾರದ ವಿರುದ್ಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗೆ ದಾಖಲೆ ಸಮೇತ ಪತ್ರ ಬರೆಯಲಾಗಿದೆ ಎಂದು ಭೀಮಪ್ಪ ಗಡಾದ ತಿಳಿಸಿದರು.
ಇದನ್ನೂಓದಿ:ಡಿಕೆಶಿ ಕೇಸ್ ವಾಪಸ್ ಪಡೆದಿರುವುದನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗಲಿ: ಸಿಎಂ ಸಿದ್ದರಾಮಯ್ಯ