ಬೆಳಗಾವಿ:ಲಾಕ್‌ಡೌನ್ ಸಡಿಲಿಕೆ ಆದ ಬಳಿಕ ಎರಡನೇ ದಿನಕ್ಕೆ ಕಾಲಿಟ್ಟ ಬಸ್ ಸಂಚಾರಕ್ಕೆ ಪ್ರಯಾಣಿಕರ ಕೊರತೆ ಒಂದೆಡೆಯಾದರೆ, ಬರುವ ಪ್ರಯಾಣಿಕರು ಕೂಡ ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಸೇರುತ್ತಿರುವುದು ಸಿಬ್ಬಂದಿಗೆ ತಲೆನೋವಾಗಿದೆ.
ಬೆಳಗಾವಿ: ಸಾಮಾಜಿಕ ಅಂತರ ಮರೆತು ಬಸ್ ಪ್ರಯಾಣ
ಬೆಳಗಾವಿ ಜಿಲ್ಲೆಯಲ್ಲಿ ಬಸ್ ಪ್ರಯಾಣದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪ್ರಯಾಣಿಕರು ಗುಂಪು ಗುಂಪಾಗಿ ಸೇರುವುದರಿಂದ ಕೊರೊನಾ ಹರಡುವ ಭೀತಿ ಇಮ್ಮಡಿಯಾಗಿದೆ.
ಬೇರೆ ಜಿಲ್ಲೆಗಳಿಗೆ ತೆರಳಲು ನಗರದ ಕೇಂದ್ರೀಯ ಬಸ್ ನಿಲ್ದಾಣ ಆವರಣದ ಹೊರಗೆ ಬೆಳಿಗ್ಗೆಯಿಂದಲೇ ಕಾದಿದ್ದ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರಿಗೊಬ್ಬರು ಅಂಟಿಕೊಂಡೇ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು. ಪ್ರಯಾಣಿಕರ ಪೈಕಿ ಬೆಂಗಳೂರಿಗೆ ಹೋಗುವ ಬಸ್ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಾಗಿದ್ದು, ಈಗಾಗಲೇ ಮೂರು ಬಸ್ಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಿವೆ. ಒಂದು ಬಸ್ನಲ್ಲಿ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬೆಳಗಾವಿ ವಿಭಾಗದಿಂದ ಈಗಾಗಲೇ 250ಕ್ಕೂ ಹೆಚ್ಚು ಬಸ್ಗಳು ಸಂಚಾರ ಆರಂಭಿಸಿದ್ದು, ಮುಂದೆ ಹಂತ ಹಂತವಾಗಿ ಹೆಚ್ಚಿನ ಸಾರಿಗೆ ಬಸ್‍ಗಳನ್ನು ಬಿಡಲಾಗುವುದು ಎಂದು ಕೆಎಸ್ಆರ್ಟಿಸಿ ಡಿಸಿ ಮಹಾದೇವಪ್ಪ ಮುಂಜಿ ಹೇಳಿದ್ದಾರೆ. ಆರ್ಥಿಕ ಚೇತರಿಕೆಗೆ ಮುಂದಾಗಿರುವ ಸರ್ಕಾರ, ಬಸ್ ಸಂಚಾರವನ್ನು ಆರಂಭಿಸಿದೆ. ಆದ್ರೆ ಕೊರೊನಾ ಭೀತಿಯಿಂದ ಜನರು ಬಸ್ ಪ್ರಯಾಣಕ್ಕೆ ಮುಂದಾಗದಿರುವುದು ಸರ್ಕಾರಕ್ಕೆ ಮತ್ತಷ್ಟು ಆರ್ಥಿಕ ಹೊಡೆತ ನೀಡಲಿದೆ ಎನ್ನಲಾಗುತ್ತಿದೆ.