ಚಿಕ್ಕೋಡಿ :ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಒಡೆತನದ ಸಕ್ಕರೆ ಕಾರ್ಖಾನೆಗೆ ಬರುವ ಟ್ರ್ಯಾಕ್ಟರ್ಗಳಿಂದಾಗಿ ಕಳೆದ ನಾಲ್ಕೈದು ದಿನಗಳಿಂದ ಮೊಳೆ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತವಾಗಿತ್ತು.
ಕಾಗವಾಡದ ಮೊಳೆ ಗ್ರಾಮಕ್ಕೆ ಬಸ್ ಪುನಾರಂಭ ಈ ಬಗ್ಗೆ ಈ ಟಿವಿ ಭಾರತವು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ " 12ಕಿ.ಮೀವರೆಗೆ ಸಾಲುಗಟ್ಟಿ ನಿಂತ ಟ್ರ್ಯಾಕ್ಟರ್‌ಗಳು, ಅಥಣಿ ಸಕ್ಕರೆ ಕಾರ್ಖಾನೆ ವಿರುದ್ಧ ಜನಾಕ್ರೋಶ" ಎಂಬ ತಲೆ ಬರಹದಡಿ ಸುದ್ದಿಯನ್ನು ಪ್ರಕಟಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಕಾಗವಾಡ ತಾಲೂಕು ಆಡಳಿತ ಟ್ರ್ಯಾಕ್ಟರ್ ತೆರವು ಮಾಡಿ ಟ್ರಾಫಿಕ್ ಕಿರಿಕಿರಿ ತಪ್ಪಿಸಿ ಬಸ್ ಸಂಚಾರ ಪುನಾರಂಭಿಸಿದೆ.
ಘಟನೆ ಹಿನ್ನೆಲೆ:
ಕೆಂಪವಾಡ ಗ್ರಾಮದಲ್ಲಿರುವ ಅಥಣಿ ಶುಗರ್ ಫ್ಯಾಕ್ಟರಿಯಿಂದ ಚಿಕ್ಕೋಡಿ ಉಪ ವಿಭಾಗದ ಕಾಗವಾಡ ಮತ್ತು ಅಥಣಿ ರಾಜ್ಯ ಹೆದ್ದಾರಿಯಲ್ಲಿ ಸಕ್ಕರೆ ಕಾರ್ಖಾನೆಗೆ ಬರುವ ನೂರಾರು ಟ್ರ್ಯಾಕ್ಟರ್ಗಳಿಂದ ಟ್ರಾಫಿಕ್ ಜಾಮ್ ಆಗುತ್ತಿತ್ತು. ಇದರ ಪರಿಣಾಮ, ಮೊಳೆ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತವಾಗಿತ್ತು. ಬೇರೆ ಬೇರೆ ಗ್ರಾಮಗಳಿಗೆ ತೆರಳುವ ಸಾರ್ವಜನಿಕರು ಕಾರ್ಖಾನೆ ಪ್ರಾರಂಭ ಆದಾಗಿನಿಂದ ತೊಂದರೆ ಅನುಭವಿಸುತ್ತಿದ್ದರು. ಇದೀಗ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಇತ್ತ ಮೊಳೆ ಗ್ರಾಮಕ್ಕೆ ಬಸ್ ಸಂಚಾರ ಆರಂಭ ಆಗಿದ್ದರಿಂದ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದರು.