ಚಿಕ್ಕೋಡಿ : ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಕಠಿಣ ಕರ್ಫ್ಯೂ ಹೇರಲಾಗಿದ್ದು, ಮಹಾರಾಷ್ಟ್ರದ ಮಾರುಕಟ್ಟೆಗಳನ್ನೇ ಅವಲಂಬಿಸಿರುವ ಕರ್ನಾಟಕದ ಗಡಿ ಭಾಗದ ಜನರು ಸಮಸ್ಯೆಗೆ ಸಿಲುಕಿದ್ದಾರೆ.
ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ ತಾಲೂಕಿನ ಕೊಗನೋಳಿ ಹಾಗೂ ಕಾಗವಾಡ ಪಟ್ಟಣ ಹೊರತುಪಡಿಸಿದರೆ, ಮಹಾರಾಷ್ಟ್ರ- ಕರ್ನಾಟಕ ಸಂಪರ್ಕಿಸುವ ರಸ್ತೆಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ. ಇದರಿಂದ ಮಹಾರಾಷ್ಟ್ರ-ಕರ್ನಾಟಕದ ನಡುವೆ ನಡೆಯುತ್ತಿದ್ದ ಸ್ಟೀಲ್ ಪಾತ್ರೆ, ದಿನ ಬಳಕೆ ವಸ್ತುಗಳು, ದವಸ- ಧಾನ್ಯ, ಹಣ್ಣು ವಹಿವಾಟು ಸ್ಥಗಿತಗೊಂಡಿದೆ. ಹೀಗಾಗಿ, ಗಡಿಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಅನಗತ್ಯ ಕಾರಣಗಳಿಗೆ ಗುಂಪು ಸೇರಿದ್ರೆ ಯಾವುದೇ ಕಾರಣಕ್ಕೂ ಸಹಿಸಲ್ಲ: ಬೆಳಗಾವಿ ಡಿಸಿ ಎಚ್ಚರಿಕೆ
ಬೆಳಗಾವಿ ಜಿಲ್ಲೆಯ ಕಾಗವಾಡ, ಅಥಣಿ, ರಾಯಬಾಗ, ಚಿಕ್ಕೋಡಿ ನಿಪ್ಪಾಣಿ ತಾಲೂಕಿನ ಗ್ರಾಮಗಳು ಹೆಚ್ಚಾಗಿ ಮಹಾರಾಷ್ಟ್ರದ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿವೆ. ಬೆಳಗಾವಿ ಮಾರುಕಟ್ಟೆ ತುಂಬಾ ದೂರದಲ್ಲಿರುವುದರಿಂದ ಇಲ್ಲಿನ ಜನರ ಹೆಚ್ಚಾಗಿ ಮಹಾರಾಷ್ಟ್ರಕ್ಕೆ ತೆರಳಿ ವ್ಯಪಾರ ವಹಿವಾಟು ನಡೆಸುತ್ತಾರೆ. ಮಹಾರಾಷ್ಟ್ರದಲ್ಲಿ ಕರ್ಫ್ಯೂ ಇರುವುದರಿಂದ ಗಡಿಭಾಗದ ಜನ ದುಪ್ಪಟ್ಟು ಹಣ ನೀಡಿ ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಈ ಭಾಗದ ಜನ ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಒಂದು ವೇಳೆ ಚಿಕ್ಕೋಡಿ ಜಿಲ್ಲೆಯಾದರೆ ಸೂಕ್ತ ಮಾರುಕಟ್ಟೆ ನಿರ್ಮಾಣವಾಗಬಹುದು. ಇದರಿಂದ ಗಡಿ ಭಾಗದ ಗ್ರಾಮಗಳಿಗೆ ಸಹಾಯವಾಗಲಿದೆ ಎನ್ನುವುದು ಜನರ ಮಾತು.