ಕರ್ನಾಟಕ

karnataka

ETV Bharat / state

ಬೆಳಗಾವಿ ಪ್ರವೇಶಕ್ಕೆ ಕನ್ನಡಪರ ಹೋರಾಟಗಾರರಿಗೆ ಪೊಲೀಸರ ತಡೆ.. ಗಡಿಯಲ್ಲಿ ಹೆಚ್ಚಿದ ತಿಕ್ಕಾಟ - ಮಹಾ ಸಚಿವದ್ವಯರ ಭೇಟಿ

ಬೆಳಗಾವಿ ಜಿಲ್ಲೆಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿರುವ ಕನ್ನಡ ಪರ ಹೋರಾಟಗಾರರಿಗೆ ಗಡಿ ಭಾಗದಲ್ಲೇ ಪೊಲೀಸರು ತಡೆ ಒಡ್ಡಿದ್ದಾರೆ. ಇದು ಖಾಕಿ ಪಡೆ ಮತ್ತು ಹೋರಾಟಗಾರರ ಮಧ್ಯೆ ವಾಗ್ವಾದ ಉಂಟು ಮಾಡಿದೆ.

border-dispute-kannada-activists-disallowed-entry
ಬೆಳಗಾವಿ ಪ್ರವೇಶಕ್ಕೆ ಕನ್ನಡಪರ ಹೋರಾಟಗಾರರಿಗೆ ಪೊಲೀಸರ ತಡೆ

By

Published : Dec 6, 2022, 1:48 PM IST

Updated : Dec 6, 2022, 2:19 PM IST

ಬೆಳಗಾವಿ:ಮಹಾರಾಷ್ಟ್ರದ ಸಚಿವರಿಗೆ ರಾಜ್ಯ ಭೇಟಿ ನಿರ್ಬಂಧ ಮತ್ತು ಸಚಿವರೇ ಭೇಟಿ ರದ್ದು ಮಾಡಲಾಗಿದ್ದರೂ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಉದ್ವಿಗ್ನತೆ ಮುಂದುವರೆದಿದೆ. ರಾಜ್ಯದ ನಾನಾ ಕಡೆಗಳಿಂದ ಸಾಗರೋಪಾದಿಯಲ್ಲಿ ಬರುತ್ತಿರುವ ಕನ್ನಡಪರ ಹೋರಾಟಗಾರರಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಇದು ಖಾಕಿ ಪಡೆ ಮತ್ತು ಹೋರಾಟಗಾರರ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮಂಗಳವಾರ ಭೇಟಿ ನೀಡುವ ಬಗ್ಗೆ ಘೋಷಿಸಲಾಗಿತ್ತು. ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ, ರಾಜ್ಯ ಸರ್ಕಾರ ಕೂಡ ಸಚಿವರ ಭೇಟಿ ಬೇಡವೆಂದು ಸಲಹೆ ನೀಡಿತ್ತು.

ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಹಿನ್ನೆಲೆಯಲ್ಲಿ ಮಹಾ ಸಚಿವದ್ವಯರ ಭೇಟಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಸಚಿವರು ತಮ್ಮ ಭೇಟಿಯನ್ನು ರದ್ದು ಮಾಡಿದ್ದರು. ಜಿಲ್ಲೆಯಲ್ಲಿ ಎಂಇಎಸ್​ ಪುಂಡಾಟಿಕೆಯ ವಿರುದ್ಧ ಕನ್ನಡಪರ ಸಂಘಟನೆಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದವು.

ಕನ್ನಡಪರ ಸಂಘಟನೆಗಳ ಶಕ್ತಿ ಪ್ರದರ್ಶನ:ಮಹಾ ಸಚಿವರ ಭೇಟಿ ರದ್ದಾದರೂ ಜಿಲ್ಲೆಯಲ್ಲಿ ಎಂಇಎಸ್​ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿವೆ. ಪೊಲೀಸ್​ ಸರ್ಪಗಾವಲಿನ ಮಧ್ಯೆಯೂ ಕನ್ನಡ ಸಂಘಟನೆಗಳು ಮಹಾರಾಷ್ಟ್ರದ ವಿರುದ್ಧ ಘೋಷಣೆ ಕೂಗಲಾಗುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆ ನಗರದ ಚನ್ನಮ್ಮ ವೃತ್ತದಲ್ಲಿ ರ್‍ಯಾಲಿ ಹಮ್ಮಿಕೊಂಡಿತ್ತು. ಆದರೆ, ರಾಜ್ಯದ ನಾನಾ ಜಿಲ್ಲೆಗಳಿಂದ ಬರುವ ಕನ್ನಡಪರ ಹೋರಾಟಗಾರರ ಪ್ರವೇಶವನ್ನು ಹಿರೇಬಾಗೇವಾಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದಿದ್ದಾರೆ. ಇದರಿಂದ ಗಡಿಯಲ್ಲಿ ಪೊಲೀಸರು ಮತ್ತು ಕನ್ನಡಪರ ಹೋರಾಟಗಾರರ ಮಧ್ಯೆ ತಿಕ್ಕಾಟ ನಡೆಯುತ್ತಿದೆ.

ಕರವೇ ಕಾರ್ಯಕರ್ತರ ಪ್ರತಿಭಟನೆ

10ಕ್ಕೂ ಅಧಿಕ ವಾಹನಗಳ ಮೇಲೆ ಕಲ್ಲು ತೂರಾಟ: ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರ ಬೆಳಗಾವಿ ಪ್ರವೇಶಕ್ಕೆ ನಿರಾಕರಣೆ ಹಿನ್ನೆಲೆ ರೊಚ್ಚಿಗೆದ್ದಿರುವ ಕರವೇ ಕಾರ್ಯಕರ್ತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೂಲ್ ನಾಕಾ ಬಳಿ ಮಹಾರಾಷ್ಟ್ರ ನೋಂದಣಿಯ ಲಾರಿಗಳ ಮೇಲೆ ಕಲ್ಲು ತೂರಾಟ ಮತ್ತು ಮಸಿ ಬಳಿದು ತಮ್ಮ ಆಕ್ರೋಶ ಹೊರಹಾಕಿದರು. ಲಾರಿ ಮೇಲೆ ನಿಂತು ಕನ್ನಡ ಬಾವುಟ ಪ್ರದರ್ಶನ ಮಾಡಿದ ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪ್ರತಿಭಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸೇರಿ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯಬೇಕಾಯಿತು. ಈ ತಿಕ್ಕಾಟದಲ್ಲಿ 10ಕ್ಕೂ ಅಧಿಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಓದಿ:ಕರ್ನಾಟಕ ಸೇರುವುದಾಗಿ ಘೋಷಿಸಿದ ಗಡಿಭಾಗದ ಜನರು.. ಹಲವು ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ನೋಟಿಸ್

Last Updated : Dec 6, 2022, 2:19 PM IST

ABOUT THE AUTHOR

...view details