ಬೆಳಗಾವಿ:ಬೆಂಗಳೂರಲ್ಲಿ ಓಡಾಡಿದ ಬಿಎಂಟಿಸಿ ಹಳೆಯ ಬಸ್‌ಗಳನ್ನು ಹುಬ್ಬಳ್ಳಿ ಮತ್ತು ಬೆಳಗಾವಿಗೆ ರವಾನೆ ಮಾಡಿದ್ದರಿಂದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸೇರಿದಂತೆ ಸ್ಥಳೀಯರು ಅಸಮಧಾನ ಹೊರಹಾಕಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ ಮತ್ತು ಬೆಳಗಾವಿ ವಿಭಾಗಕ್ಕೆ ತಲಾ 50 ಹಳೆಯ ಬಿಎಂಟಿಸಿ ಬಸ್ ನೀಡಿದ್ದು ಬೆಂಗಳೂರಿಗೆ ಬೆಣ್ಣೆ, ಬೆಳಗಾವಿ ಮತ್ತು ಹುಬ್ಬಳ್ಳಿಗೆ ಸುಣ್ಣ ಎಂಬಂತಿದೆ ಎಂದು ಸಾರಿಗೆ ಇಲಾಖೆ ನಡೆಗೆ ಕಂಡ ಕಾರಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ನೋಟಿನ ಮಳೆ: ಕೆಆರ್ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ನೋಟು ತೂರಿದ ವ್ಯಕ್ತಿ ಪೊಲೀಸ್ ವಶಕ್ಕೆ
ಅಧಿಕಾರಿಗಳ ವಿರುದ್ಧ ಆಕ್ರೋಶ:ಕೋಟ್ಯಂತರ ರೂ. ಖರ್ಚು ಮಾಡಿ ಬಿಎಂಟಿಸಿಗೆ ಹೊಸ ಬಸ್ ಖರೀದಿ ಮಾಡಿದ್ದು ಅಲ್ಲಿನ ಗುಜರಿ ಬಸ್‌ಗಳನ್ನು ಬೆಳಗಾವಿ ಮತ್ತು ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ. ಬೆಂಗಳೂರಿಗೆ ಹೊಸ ಬಸ್ ನೀಡಿದರೆ ಬೆಳಗಾವಿ ಮತ್ತು ಹುಬ್ಬಳ್ಳಿಗೆ ಹಳೆ ಬಸ್ ನೀಡಲಾಗಿದೆ. ಬೆಳಗಾವಿ ವಿಭಾಗವೊಂದರಲ್ಲೇ 10 ಲಕ್ಷ ಕಿಲೋ ಮೀಟರ್ಗೂ ಹೆಚ್ಚು ಓಡಿದ 300 ಬಸ್‌ಗಳಿವೆ. ಈ ಹಳೆಯ ಬಸ್‌ಗಳ ಬದಲಾವಣೆಗೆ ಮುಂದಾಗಬೇಕಿದ್ದ ಸಾರಿಗೆ ಇಲಾಖೆ ಮತ್ತೆ ಬಿಎಂಟಿಸಿಯ ಹಳೆಯ ಬಸ್‌ಗಳನ್ನು ರವಾನಿಸಿದೆ ಎಂದು ಹೇಳಲು ಇಚ್ಛಿಸದ ಸಾರಿಗೆ ಸಿಬ್ಬಂದಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮೊನ್ನೆಯಷ್ಟೇ ತಪ್ಪಿದ ಭಾರಿ ಅನಾಹುತ: ಬೆಳಗಾವಿ ಡಿಪೋ ನಂಬರ್ 2ಕ್ಕೆ 50 ಹಳೆಯ ಬಿಎಂಟಿಸಿ ಬಸ್ ನೀಡಲಾಗಿದೆ. ಈಗಾಗಲೇ ಬೆಳಗಾವಿ ನಗರದಿಂದ ತಾಲೂಕು ವ್ಯಾಪ್ತಿಯಲ್ಲಿ ಈ ಬಸ್ಗಳು ಸಂಚರಿಸುತ್ತಿವೆ. ಮೊನ್ನೆಯಷ್ಟೇ ಬೆಳಗಾವಿ ನಗರದಿಂದ ರಾಮತೀರ್ಥ ನಗರ ಮಧ್ಯೆ ಸಂಚರಿಸುತ್ತಿದ್ದ ಬಸ್ವೊಂದರ ಫುಟ್‌ರೆಸ್ಟ್ ಕಟ್ ಆಗಿತ್ತು. ಫುಟ್‌ರೆಸ್ಟ್ ಕಟ್ ಆಗಿರುವ ಬಸ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿದ್ದವು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಸಂಚರಿಸುವ ಬಸ್‌ಗಳಲ್ಲಿ ಅನಾಹುತ ಆದ್ರೆ ಯಾರು ಹೊಣೆ? ಹಾಗಾಗಿ ಅಪಘಾತ ಸಂಭವಿಸುವ ಮುನ್ನ ಇಲಾಖಾ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ತಮ್ಮ ನೋವು ತೋಡಿಕೊಂಡಿದ್ದಾರೆ.
ಶಾಸಕ ಅಭಯ್ ಪಾಟೀಲ್ ಒತ್ತಾಯ:ಹಳೆಯ ಬಸ್‌ಗಳನ್ನು ಬೆಳಗಾವಿಗೆ ಕಳುಹಿಸಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಬಿಜೆಪಿ ಶಾಸಕ ಅಭಯ್ ಪಾಟೀಲ್ ಒತ್ತಾಯ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಂದ್ರೆ ಗುಜರಿ ಗೋದಾಮು ಅಲ್ಲ. ಹಳೆಯ ಬಸ್‌ಗಳನ್ನು ಪೇಂಟ್ ಮಾಡಿ ಕಳಿಸಿ ಉತ್ತರ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ. ನಮಗೂ ಹೊಸ ಬಸ್‌ಗಳನ್ನು ನೀಡಿ. ಈ ರೀತಿ ಹಳೆಯ ಗುಜರಿ ಬಸ್‌ಗಳನ್ನು ಕಳಿಸಿ ಅಪಮಾನ ಮಾಡುವಂತದ್ದು ಸರಿಯಲ್ಲ ಎಂದು ಶಾಸಕರು ಹರಿಹಾಯ್ದಿದ್ದಾರೆ.
ಇದನ್ನೂ ಓದಿ:ವೇತನ ಪರಿಷ್ಕರಿಸುವಂತೆ ಆಗ್ರಹಿಸಿ ರಸ್ತೆ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ: ಬಸ್ ಸಂಚಾರದಲ್ಲಿಲ್ಲ ವ್ಯತ್ಯಯ
ಇದೇನು ಗುಜರಿ ಗೋದಾಮು ಅಲ್ಲ. ಬೆಳಗಾವಿಗೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಕಳಿಸಬೇಕು. ಬೆಳಗಾವಿ ಎರಡನೇ ರಾಜಧಾನಿ ಅಂತೀವಿ. ಸುವರ್ಣಸೌಧ ಕಟ್ಟಿದೀವಿ ಅಂತೀವಿ. ಅದೇ ರೀತಿ ಉಪಕರಣಗಳ ಕಳಿಸುವ ಕೆಲಸ ಆಗಬೇಕು. ಈ ರೀತಿ ಗುಜರಿ ಬಸ್‌ಗಳನ್ನು ಸ್ವೀಕರಿಸಬಾರದು. ಹೊಸ ಬಸ್‌ಗಳನ್ನು ನೀಡಬೇಕು ಎಂದು ಸಚಿವರಲ್ಲಿ ವಿನಂತಿ ಮಾಡುವೆ. ಇದು ಅಧಿಕಾರಿಗಳು ಮಾಡಿದ ಪ್ರಮಾದ. ಅಧಿಕಾರಿಗಳ ಮೇಲೆ ನಿಯಂತ್ರಣ ಮಾಡುವ ಕೆಲಸವನ್ನು ಮಂತ್ರಿಗಳು ಮಾಡಬೇಕೆಂದು ಆಪೇಕ್ಷಿಸುವೆ ಅಭಯ್ ಪಾಟೀಲ್ ಹೇಳಿದರು.