ಚಿಕ್ಕೋಡಿ: ಅಂಧ ವಿದ್ಯಾರ್ಥಿಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಪೂರ್ವ ಟೋಪಗಿಗೆ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಸನ್ಮಾನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ವಿದ್ಯಾರ್ಥಿ ಅಪೂರ್ವ ಟೋಪಗಿ ಅಂಧ ವಿದ್ಯಾರ್ಥಿಗಳಲ್ಲಿ SSLC ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ಇಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಂ ಮುಂಜೆ ಹಾಗೂ ಕಾಗವಾಡ ಭಾಗದ ಶಿಕ್ಷಕರು ಅಪೂರ್ವ ಟೋಪಗಿ ಅವರ ಮನೆಗೆ ಬಂದು ಸತ್ಕರಿಸಿದರು.ಅಪೂರ್ವ ಟೋಪಗಿ ಅಂಧಳಾದರೂ ವಿದ್ಯಾಭ್ಯಾಸಕ್ಕೆ ಅವರ ತಂದೆ ತಾಯಿಗಳು ಯಾವತ್ತೂ ಕಡಿಮೆ ಮಾಡಿಲ್ಲ. ಅಪೂರ್ವ ಮುಂದೆ ಐಎಎಸ್ ಆಫೀಸರ್ ಆಗುವ ಕನಸನ್ನು ಕಂಡಿದ್ದು ಅಂಧ ವಿದ್ಯಾರ್ಥಿಗಳ ತೊಂದರೆ ಬಗ್ಗೆ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಜೊತೆ ಅಪೂರ್ವ ಟೋಪಗಿ ಚರ್ಚೆ ಮಾಡಿದಳು. ಚರ್ಚೆ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ ಡಿಡಿಪಿಐ ಗಜಾನನ ಮನ್ನಿಕೇರಿ ಅಪೂರ್ವ ಮುಂದಿನ ಶಿಕ್ಷಣದ ಬಗ್ಗೆ ಈಗಾಗಲೇ ಅಪೂರ್ವಳ ಬಳಿ ಚರ್ಚಿಸಿದ್ದೇನೆ. ಅಪೂರ್ವ ಒಬ್ಬಳು ಅಪೂರ್ವ ವಿದ್ಯಾರ್ಥಿಯಾಗಿದ್ದಾಳೆ. ಸತತ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಅಪೂರ್ವ ತೋರಿಸಿಕೊಟ್ಟಿದ್ದಾಳೆ. ನಮ್ಮ ಜಿಲ್ಲೆಯ, ರಾಜ್ಯದ ಆಸ್ತಿಯಾಗಿ ಹೊರಹೊಮ್ಮಿದ್ದಾಳೆ. 625 ಕ್ಕೆ 617 ಅಂಕ ಪಡೆಯುವುದರ ಮೂಲಕ ಗ್ರಾಮದ ಹಾಗೂ ತಂದೆ ತಾಯಿಗಳ ಕೀರ್ತಿ ಹೆಚ್ಚಿಸಿದ್ದಾಳೆ ಎಂದು ಹೇಳಿದರು.