ಬೆಳಗಾವಿ: ಉಪ'ಸಮರ'ಕ್ಕೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಭರ್ಜರಿ ಮತಬೇಟೆ ನಡೆಯುತ್ತಿದೆ. ಅಚ್ಚರಿ ಎಂದರೆ ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಗುರು ದಾಶ್ಯಾಳ ಅವರಿಗೆ ಜೆಡಿಎಸ್ ಈ ಬಾರಿ ಟಿಕೆಟ್ ನೀಡಿದೆ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಇದರ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ತಂತ್ರ ಅಡಗಿದೆ ಎನ್ನಲಾಗುತ್ತಿದೆ.
ಜೆಡಿಎಸ್ನಿಂದ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಪರ್ಧೆ: ಕುಮಟಳ್ಳಿ ಮಣಿಸಲು ಸವದಿ ಮಾಸ್ಟರ್ ಪ್ಲಾನ್? - ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಹೇಳಿಕೆ
ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಗುರು ದಾಶ್ಯಾಳ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟಿಸಿದ್ದು, ಇದರ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ತಂತ್ರ ಅಡಗಿದೆ ಎನ್ನಲಾಗಿದೆ.
ಅಥಣಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಐದು ಜನ ಪ್ರಮುಖ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರೆಲ್ಲಾ ಜೆಡಿಎಸ್ ಪಕ್ಷಕ್ಕಾಗಿ ನಿರಂತರ ಗುರುತಿಸಿಕೊಂಡವರು. ಆದರೆ ಅವರನ್ನು ಬಿಟ್ಟು ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯನಿಗೆ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ. ಅನರ್ಹ ಶಾಸಕರನ್ನು ಯಾವುದೇ ಕ್ಷೇತ್ರದಲ್ಲೂ ಗೆಲ್ಲೋಕೆ ನಾನು ಬಿಡಲ್ಲ ಎಂದ ಹೆಚ್ಡಿಕೆ ಮಾತು ಅಥಣಿ ಕ್ಷೇತ್ರದಲ್ಲಿ ನಿಜವಾಗುತ್ತಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಗುರು ದಾಶ್ಯಾಳ ಅವರು ಡಿಸಿಎಂ ಲಕ್ಷ್ಮಣ ಸವದಿಯವರಿಗೆ ಆಪ್ತರಾಗಿದ್ದು, ಅಥಣಿ ರಾಜಕೀಯ ವಲಯದಲ್ಲಿ ಕಾಣದ ಕೈಗಳು ರಾಜಕೀಯ ಲೆಕ್ಕಾಚಾರ ಬರೆಯುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಗುರು ದಾಶ್ಯಾಳ ವಿಷಯದಲ್ಲಿ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಸಿಎಂ ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಇದರ ನಡುವೆ ಗುರು ದಾಶ್ಯಾಳ ನಾಮಪತ್ರ ಹಿಂಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಜೆಡಿಎಸ್ನಿಂದ ಗುರು ದಾಶ್ಯಾಳ ಸ್ಪರ್ಧಿಸಿದ್ರೆ, ಮಹೇಶ್ ಕುಮಟಳ್ಳಿಗೆ ಎಲ್ಲೋ ಒಂದು ಕಡೆ ಹಿನ್ನಡೆಯಾಗುವುದು ಖಚಿತ ಅನ್ನೋದು ಸಾರ್ವಜನಿಕರ ಮಾತು.