ಅಥಣಿ:ಉಪಚುನಾವಣೆ ಸಂಬಂಧ ನಗರದ ಆರ್.ಎನ್. ಕುಲಕರ್ಣಿ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಗೆ ಹೋಗದಂತೆ ಡಿಸಿಎಂ ಲಕ್ಷ್ಮಣ್ ಸವದಿಗೆ ಕಾರ್ಯಕರ್ತರು ತಡೆ ಹಾಕಿದ್ದಾರೆ.
ಕುಮಟಳ್ಳಿಯನ್ನು ಅಭ್ಯರ್ಥಿ ಎಂದು ಒಪ್ಪಲು ಸಾಧ್ಯವಿಲ್ಲ: ಸವದಿ ಸ್ಪರ್ಧೆಗೆ ಪಟ್ಟು ಹಿಡಿದ ಬಿಜೆಪಿ ಕಾರ್ಯಕರ್ತರು - ಡಿಸಿಎಂ ಲಕ್ಷ್ಮಣ ಸವದಿ ಮನೆ ಮುಂದೆ ಪ್ರತಿಭಟನೆ
ನಮ್ಮಿಂದ ಮಹೇಶ್ ಕುಮಟಳ್ಳಿ ಅವರು ಅಭ್ಯರ್ಥಿ ಎಂದು ಒಪ್ಪಲು ಸಾಧ್ಯವಿಲ್ಲ. ನೀವೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಡಿಸಿಎಂ ಲಕ್ಷ್ಮಣ್ ಸವದಿ ಮನೆ ಮುಂದೆ ಪಟ್ಟು ಹಿಡಿದಿದ್ದರು.
ನಾಳೆ ಮಹೇಶ್ ಕುಮಟಳ್ಳಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಇಂದು ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮತ್ತು ಡಿಸಿಎಂ ಲಕ್ಷ್ಮಣ್ ಸವದಿ ಹೊರಟಿದ್ದರು. ಈ ವೇಳೆಸವದಿ ಮನೆ ಮುಂದೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ನಮ್ಮಿಂದ ಮಹೇಶ್ ಕುಮಟಳ್ಳಿ ಅವರನ್ನು ಅಭ್ಯರ್ಥಿ ಎಂದು ಒಪ್ಪಲು ಸಾಧ್ಯವಿಲ್ಲ. ನೀವೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ಪಕ್ಷದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮಹೇಶ್ ಕುಮಟಳ್ಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಒತ್ತಾಯಿಸಿದರು.
ಇನ್ನು, ಒಂದೇ ದಿನ ಕಾಲಾವಕಾಶ ಇದೆ, ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಟಿಕೆಟ್ ನೀಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಮಹೇಶ್ ಕುಮಟಳ್ಳಿ ಅವರಿಗೆ ಯಾವುದೇ ಕಾರಣಕ್ಕೂ ವೋಟು ಹಾಕುವುದಿಲ್ಲ ಎಂದಿದ್ದಾರೆ. ಇಷ್ಟೆಲ್ಲ ಹೈಡ್ರಾಮ ನಡುವೆಯೂ ಡಿಸಿಎಂ ಲಕ್ಷ್ಮಣ್ ಸವದಿ ಪೂರ್ವಭಾವಿ ಸಭೆಗೆ ಹಾಜರಾಗಿದ್ದಾರೆ.