ಬೆಳಗಾವಿ :ಎರಡೂವರೆ ದಶಕಗಳಿಂದ ನಾಡದ್ರೋಹಿ ಎಂಇಎಸ್ ಹಿಡಿತದಲ್ಲಿದ್ದ ಬೆಳಗಾವಿ ಮಹಾನಗರ ಪಾಲಿಕೆ ಇದೀಗ ಬಿಜೆಪಿ ವಶವಾಗಿದೆ. ಅಮೋಘ ಜಯದೊಂದಿಗೆ ಪಾಲಿಕೆ ಚುಕ್ಕಾಣಿ ಹಿಡಿದ ಮೊದಲ ರಾಜಕೀಯ ಪಕ್ಷ ಎಂಬ ಕೀರ್ತಿಗೂ ಬಿಜೆಪಿ ಪಾತ್ರವಾಗಿದೆ.
ಬಿಜೆಪಿಗೆ ದಿಗ್ವಿಜಯದ ಮಾಲೆ :ಈ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ್ರೆ ನಾಡದ್ರೋಹಿ ಎಂಇಎಸ್ ಬೆಳಗಾವಿಯಲ್ಲಿ ಸಂಪೂರ್ಣ ನಿರ್ನಾಮವಾಗಿದೆ. ರಾಷ್ಟ್ರೀಯ ಪಕ್ಷಗಳ ಸ್ಪರ್ಧೆಯಿಂದ ರಂಗು ಪಡೆದಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ದಿಗ್ವಿಜಯ ಸಾಧಿಸಿದೆ. ಆ ಮೂಲಕ ಸ್ವತಂತ್ರವಾಗಿ ಪಾಲಿಕೆ ಚುಕ್ಕಾಣಿ ಹಿಡಿಯುವಲ್ಲಿ ಕಮಲ ನಾಯಕರು ಯಶಸ್ವಿಯಾಗಿದ್ದಾರೆ.
58 ವಾರ್ಡ್ಗಳ ಪೈಕಿ 55ರಲ್ಲಿ ಸ್ಪರ್ಧಿಸಿದ್ದ ಬಿಜೆಪಿ 36 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸಾಮೂಹಿಕ ನಾಯಕತ್ವ ಹಾಗೂ ಚುನಾವಣೆಯ ತಂತ್ರಗಾರಿಕೆಯ ಮೂಲಕ ಎಂಇಎಸ್ಗೆ ಠಕ್ಕರ್ ಕೊಟ್ಟಿರುವ ಕಮಲ ನಾಯಕರು ಇತ್ತ ಕಾಂಗ್ರೆಸ್ ನ ನೆಲಕಚ್ಚುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ:ಹು-ಧಾ ಮಹಾನಗರ ಪಾಲಿಕೆ ಫಲಿತಾಂಶ: ಗೆಲುವಿನ ಸನಿಹದಲ್ಲಿ ಎಡವಿದ ಬಿಜೆಪಿ, ಕಾಂಗ್ರೆಸ್ನಿಂದ ಭರ್ಜರಿ ಟಕ್ಕರ್!
58 ವಾರ್ಡ್ಗಳ ಪೈಕಿ 55 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 36 ಸ್ಥಾನ, 46 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 9 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. 21 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದ ಎಂಇಎಸ್ 2 ಸ್ಥಾನ, 6 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ 1 ಹಾಗೂ 10 ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಆಪ್ ಹಾಗೂ ಜೆಡಿಎಸ್ ಶೂನ್ಯ ಸಾಧನೆ ಮಾಡಿವೆ.
32 ಮ್ಯಾಜಿಕ್ ನಂಬರ್ ಹೊಂದಿರುವ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಅದಕ್ಕಿಂತ ಹೆಚ್ಚಿನ ಅಂದರೆ 36 ಸ್ಥಾನ ಗಳಿಸಿದೆ. ಮೇಯರ್ ಹಾಗೂ ಉಪಮೇಯರ್ ಆಯ್ಕೆ ವೇಳೆ ಮತಚಲಾಯಿಸುವ ಹಕ್ಕು ಹೊಂದಿರುವ ನಾಲ್ವರು ಶಾಸಕರ ಪೈಕಿ ಇಬ್ಬರು ಬಿಜೆಪಿಯವರಾಗಿದ್ದಾರೆ. ಇನ್ನು, ಬೆಳಗಾವಿ ಹಾಗೂ ಚಿಕ್ಕೋಡಿ ಸಂಸದರು ಬಿಜೆಪಿಯವರೇ ಆಗಿದ್ದಾರೆ. 36 ಸದಸ್ಯರ ಜೊತೆಗೆ ಈ ನಾಲ್ಕು ಮತಗಳು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗೆ ಬೀಳಲಿವೆ.
ಯಶಸ್ವಿಯಾಯ್ತು ಬಿಜೆಪಿ ನಾಯಕರ ತಂತ್ರ :ಇತಿಹಾಸದಲ್ಲಿ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಬೆಳಗಾವಿ ಮಹಾನಗರ ಪಾಲಿಕೆಚುನಾವಣೆ ನಡೆದಿತ್ತು. ನಾಡದ್ರೋಹಿ ಎಂಇಎಸ್ ಅನ್ನು ಮನೆಗೆ ಕಳಿಸಿ ದಿಗ್ವಿಜಯ ಸಾಧಿಸಲೆಂದೇ ಬಿಜೆಪಿ ಹಲವು ತಂತ್ರಗಳನ್ನು ಹೆಣೆದಿತ್ತು. ಅದರಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಲೋಕಸಭೆ ಉಪಚುನಾವಣೆಗೂ ಮುನ್ನವೇ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆ ಮೇಲೆ ಎದುರಿಸುವುದಾಗಿ ಬಿಜೆಪಿ ಘೋಷಿಸಿತ್ತು. ಬಳಿಕ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ನೀರಸ ಗೆಲುವಿನಿಂದ ಕಂಗೆಟ್ಟಿದ್ದ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಎಂಇಎಸ್ ಅಭ್ಯರ್ಥಿಗಳ ವಿರುದ್ಧ ಮರಾಠಾ ಸಮುದಾಯದ ಅಭ್ಯರ್ಥಿಗಳನ್ನೇ ಬಿಜೆಪಿ ಕಣಕ್ಕಿಳಿಸಿತ್ತು. ಈ ತಂತ್ರಗಾರಿಕೆ ಬಿಜೆಪಿಗೆ ವರವಾಗಿ ಪರಣಮಿಸಲು ಕಾರಣವಾಯಿತು.
ಚುನಾವಣೆ ಸಿದ್ಧತೆಗೆ ಅವಧಿ ಕಡಿಮೆ ಇದ್ದರೂ ಸಾಮೂಹಿಕ ನಾಯಕತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಿತ್ತು. ಆಕಾಂಕ್ಷಿಗಳು ಹೆಚ್ಚಿದ್ದರೂ ಎಲ್ಲರನ್ನು ಸಮಾಧಾನಪಡಿಸುವಲ್ಲಿ ಹಾಗೂ ಬಂಡಾಯ ಸದಸ್ಯರನ್ನು ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಪಕ್ಷದ ಆದೇಶ ಉಲ್ಲಂಘಿಸಿದ 10 ಜನರನ್ನು ಉಚ್ಛಾಟಿಸುವ ಮೂಲಕ ಬಿಜೆಪಿ ಬಂಡಾಯ ಸದಸ್ಯರಿಗೆ ಎಚ್ಚರಿಕೆಯನ್ನು ರವಾನಿಸಿತ್ತು.