ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ವಿರುದ್ಧ ಸೆ.8ರಂದು ರಾಜ್ಯಾದ್ಯಂತ ಪ್ರತಿಭಟನೆ: ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ - ಈಟಿವಿ ಭಾರತ ಕರ್ನಾಟಕ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ರಾಜ್ಯದ 42 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.

bjp-will-protest-statewide-against-the-state-government-on-september-8-says-eranna-kadadi
ರಾಜ್ಯ ಸರ್ಕಾರದ ವಿರುದ್ಧ ಸೆ.8ರಂದು ರಾಜ್ಯಾದ್ಯಂತ ಪ್ರತಿಭಟನೆ: ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ

By ETV Bharat Karnataka Team

Published : Sep 2, 2023, 6:41 PM IST

Updated : Sep 2, 2023, 8:24 PM IST

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಜನ ವಿರೋಧಿ‌ ನೀತಿಗಳನ್ನು ಖಂಡಿಸಿ ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿದ್ದೇವೆ. ಈಗ ಸೆ.8ರಂದು ರಾಜ್ಯಾದ್ಯಂತ ಎಲ್ಲ ತಾಲೂಕುಗಳ ತಹಶೀಲ್ದಾರ್ ಕಚೇರಿ ಮುಂದೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದೇವೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಮಳೆಯ ಅಭಾವದಿಂದ ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಕೂಡ ಸರ್ಕಾರ ಯಾವುದೇ ರೀತಿ ರೈತರ ಸಹಾಯಕ್ಕೆ ಧಾವಿಸುತ್ತಿಲ್ಲ. ಇನ್ನು ಬಾವಿಯ ನೀರನ್ನು ಬಳಸಬೇಕು ಎಂದರೂ ಸಮರ್ಪಕ‌ ವಿದ್ಯುತ್ ಪೂರೈಸುತ್ತಿಲ್ಲ. ರೈತರ ಪಂಪ್​ಸೆಟ್​ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಹೇರಿ ರೈತರನ್ನು ಈ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ದೊಡ್ಡ ಪ್ರಮಾಣದ ಜಲಾಶಯಗಳಲ್ಲಿ ಕಡಿಮೆ‌ ನೀರು ಸಂಗ್ರಹವಾಗಿದೆ ಎಂದರು.

ಜಲಾಶಯಗಳಲ್ಲಿನ ನೀರು ಹೇಗೆ ಬಳಸಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟ ನಿಲುವು ಈ ಸರ್ಕಾರಕ್ಕಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ರಾಜ್ಯದ 42 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ಗ್ಯಾರಂಟಿ ಯೋಜನೆಗಳಿಗಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅನೇಕ ರೈತಪರ ಯೋಜನೆಗಳನ್ನು ಕೈ ಬಿಟ್ಟಿದ್ದಿರಿ. ನಿಮಗೆ ಬಿಜೆಪಿ ಮೇಲೆ ರಾಜಕೀಯ ದ್ವೇಷ ಇರಲಿ. ಆದರೆ ರೈತ ವಿರೋಧಿ ನಿಲುವು ಯಾಕೆ ತೆಗೆದುಕೊಳ್ಳುತ್ತಿದ್ದಿರಿ ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು, ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಸ್ಥಿತಿಯಿದ್ದು, ಕೂಡಲೇ ಬರಗಾಲ ಘೋಷಿಸಬೇಕು ಎಂದು ಆಗ್ರಹಿಸಿದರು.

ತಮ್ಮ ಐಎನ್​ಡಿಐಎ ಮೈತ್ರಿಕೂಟದ ಪಕ್ಷವನ್ನು ತೃಪ್ತಿಪಡಿಸಲು ರಾಹುಲ್ ಗಾಂಧಿ ಸೂಚನೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಈ ಬಾರಿ ಕೆಆರ್​ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಆದರೂ ಲೋಕಸಭೆ ಚುನಾವಣೆ ದೃಷ್ಟಿಯಿಂದ ನೀರು ಬಿಡಲಾಗಿದೆ ಎಂದು ಈರಣ್ಣ ಕಡಾಡಿ ಗಂಭೀರ ಆರೋಪ ಮಾಡಿದರು.

ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ವಿಚಾರವಾಗಿ ಮಾತನಾಡಿ, ವಿಪಕ್ಷ ನಾಯಕ ಇಲ್ಲದಿದ್ದರೂ ಪಕ್ಷದ ಯಾವುದೇ ಚಟುವಟಿಕೆ ನಿಲ್ಲಿಸಿಲ್ಲ. ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನಗಳಲ್ಲಿ ನಮ್ಮ ಶಾಸಕರು ಹೋರಾಟ ಮಾಡಿದ ಪರಿಣಾಮ ಪರಿಷತ್​ನಲ್ಲಿ ಎಪಿಎಂಸಿ‌ ತಿದ್ದುಪಡಿ ಕಾಯ್ದೆ ವಾಪಸ್ಸು ಕಳಿಸಿದ್ದೆ ಇದಕ್ಕೆ ಉದಾಹರಣೆ. ಹಾಗಾಗಿ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು.

ಈ ವೇಳೆ ನಗರ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ ಬೆನಕೆ, ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಕಲ್ಲಪ್ಪ ಶಹಾಪೂರಕರ, ಪ್ರದೀಪ ಸಾಣಿಕೊಪ್ಪ, ಬಾಹುಬಲಿ ದೊಡ್ಡನ್ನವರ, ಶರದ ಪಾಟೀಲ ಇದ್ದರು.

ಇದನ್ನೂ ಓದಿ:ಸೆಪ್ಟೆಂಬರ್ 4ರಂದು ಬರಪೀಡಿತ ತಾಲೂಕಗಳ ಹೆಸರು ಘೋಷಣೆ: ಸಿಎಂ ಸಿದ್ದರಾಮಯ್ಯ

Last Updated : Sep 2, 2023, 8:24 PM IST

ABOUT THE AUTHOR

...view details